ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಅನರ್ಹರನ್ನು ಸೇರಿಸಿಕೊಳ್ಳುತ್ತೇವೆ – ಸಿದ್ದರಾಮಯ್ಯ

ಚಿಕ್ಕಮಗಳೂರು: ಯಾರೇ ಆದರೂ ಸರಿ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಬಂದರೆ ನಾವು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಯಾರು ಬೇಕಾದರೂ ಬರಬಹುದು. ಕೆಲವರು ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ ಎಲ್ಲವನ್ನೂ ಈಗ ಹೇಳಲು ಸಾಧ್ಯವಿಲ್ಲ ಎಂದು ಯಾರು ಮತ್ತೆ ಕಾಂಗ್ರೆಸ್‍ಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬುದರ ಕುರಿತು ಗುಟ್ಟು ಬಿಟ್ಟುಕೊಡಲಿಲ್ಲ.

ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳುತ್ತೇವೆ. ಆದರೆ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಕುರಿತು ಭರವಸೆ ನೀಡುವುದಿಲ್ಲ. ಟಿಕೆಟ್ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಅದನ್ನು ನಾನು ಹೇಳುವುದಿಲ್ಲ. ಟಿಕೆಟ್ ನೀಡುವ ಕುರಿತು ಹೈಕಮಾಂಡ್ ನಿರ್ಧರಿಸಲಿದೆ. ಆದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಪಕ್ಷಕ್ಕೆ ಸೇರುವ ಕುರಿತು ಕೆಲವರು ನನ್ನೊಂದಿಗೆ ಮಾತನಾಡಿದ್ದಾರೆ. ಅದೆಲ್ಲವನ್ನೂ ಹೇಳಲಾಗುವುದಿಲ್ಲ. ಎಲ್ಲವನ್ನೂ ನಿಮಗೆ ಹೇಳಿಬಿಟ್ಟರೆ ಹೇಗೆ? ಕೆಲವನ್ನು ಹೇಳುವುದಿಲ್ಲ. ಬಹುತೇಕ ವಿಷಯಗಳನ್ನು ಹೇಳುತ್ತೇವೆ. ಕೆಲವನ್ನು ಮಾತ್ರ ಹೇಳುವುದಿಲ್ಲ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯನವರ ಹೇಳಿಕೆಗೆ ದೆಹಲಿಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಅನರ್ಹ ಶಾಸಕರು ಕಾಂಗ್ರೆಸ್ ಸೇರುವ ಸಂದರ್ಭ ಬಂದಾಗ ನೋಡಿಕೊಳ್ಳೋಣ. ಸದ್ಯಕ್ಕೆ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಮಾತನಾಡಲು ನಿರಾಕರಿಸಿದರು.

Comments

Leave a Reply

Your email address will not be published. Required fields are marked *