ಬಿಸಿಯೂಟದ ಸಂದರ್ಭದಲ್ಲಿ ಮಕ್ಕಳ ಮುಂದೆ ಬಿಇಓ ಬಾಡೂಟ- ಅಮಾನತು

ಭುವನೇಶ್ವರ: ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಮಧ್ಯಾಹ್ನದ ಬಿಸಿಯೂಟದ ವೇಳೆ ಮಕ್ಕಳ ಮುಂದೆಯೇ ಚಿಕನ್ ಕರ್ರಿ ತಿಂದಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಒಡಿಶಾದ ಸುಂದರ್‍ಘಢ ಜಿಲ್ಲೆಯಲ್ಲಿ ನಡೆದಿದ್ದು, ಮಧ್ಯಾಹ್ನದ ಬಿಸಿಯೂಟದ ಸಂದರ್ಭದಲ್ಲಿ ಮಕ್ಕಳು ಕೇವಲ ಅನ್ನ-ಸಾಂಬರ್ ಊಟ ಮಾಡುತ್ತಿದ್ದರೆ, ಈ ಅಧಿಕಾರಿ ಚಿಕನ್ ಕರ್ರಿ ಸವಿಯುತ್ತಿದ್ದ. ಹೊರಗಿನಿಂದ ಚಿಕನ್ ತರಿಸಿ ಶಾಲಾ ಮಕ್ಕಳೊಂದಿಗೆ ತಿಂದಿದ್ದಕ್ಕೆ ಸುಂದರ್‍ಘಢ ಜಿಲ್ಲೆಯ ಜಿಲ್ಲಾಧಿಕಾರಿ ನಿಖಿಲ್ ಪವನ್ ಕಲ್ಯಾಣ್ ಅವರು ಬಿಇಒ ಬಿನಾಯ್ ಪ್ರಕಾಶ್ ಸೋಯ್ ಅವರನ್ನು ಅಮಾನತುಗೊಳಿಸಿದ್ದಾರೆ. ಮಕ್ಕಳೊಂದಿಗೆ ಚಿಕನ್ ತಿನ್ನುವ ವಿಡಿಯೋ ವೈರಲ್ ಆಗಿದ್ದು ಹೀಗಾಗಿ ಡಿಸಿ ಅಮಾನುತುಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ತವ್ಯ ಸಂದರ್ಭದಲ್ಲಿ ಅಶಿಸ್ತು, ಸಾರ್ವಜನಿಕ ಸೇವೆಯ ಸಂದರ್ಭದಲ್ಲಿ ಅನುಚಿತವಾಗಿ ವರ್ತಿಸಿದ್ದಕ್ಕೆ ತಕ್ಷಣಕ್ಕೆ ಜಾರಿಗೆ ಬರುವಂತೆ ಬಿನಾಯ್ ಪ್ರಕಾಶ್ ಸೋಯ್ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದಸರಾ ರಜೆಗೂ ಮುಂಚೆ ಟಿಲಿಮಲ್ ಪ್ರಾಜೆಕ್ಟ್ ಪ್ರಾಥಮಿಕ ಶಾಲೆಯಲ್ಲಿ ಅಕ್ಟೋಬರ್ 3ರಂದು ಬಿಇಒ ಶಾಲೆಗೆ ಭೇಟಿದ್ದರು. ಆಗ ಮಧ್ಯಾಹ್ನದ ಬಿಸಿಯೂಟವನ್ನು ಪರಿಶೀಲಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶಾಲೆಗೆ ಬಂದ ಬಿಇಒ ಅವರನ್ನು ಮುಖ್ಯ ಶಿಕ್ಷಕ ತುಪಿ ಚಂದನ್ ಕಿಸಾನ್ ಹಾಗೂ ಇತರೆ ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ನಂತರ ಬಿಇಒ ಮಧ್ಯಾಹ್ನದ ಬಿಸಿಯೂಟದ ಅಡುಗೆ ಕೊಠಡಿಯನ್ನು ವೀಕ್ಷಿಸಿದ್ದಾರೆ. ಆಗ ವಿದ್ಯಾರ್ಥಿಗಳೊಂದಿಗೆ ಊಟ ಮಾಡುವುದಾಗಿ ತಿಳಿಸಿದ್ದಾರೆ.

ಬಿಇಒ ನಮ್ಮ ಜೊತೆ ಊಟ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಸಂತಸ ಪಟ್ಟಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಅನ್ನ ಸಾಂಬಾರ್ ನೀಡಿ ಬಿಇಒ ಹಾಗೂ ಶಿಕ್ಷಕರು ಚಿಕನ್ ಊಟ ಸವಿದಿರುವುದು ವಿಡಿಯೋದಲ್ಲಿ ಬಹಿರಂಗವಾಗಿದೆ.

ಬಿಇಒ ಸೋಯಾ ಅವರು ಈ ಆರೋಪವನ್ನು ನಿರಾಕರಿಸಿದ್ದು, ನನಗೆ ಬಡಿಸಿದ ಕರ್ರಿ ಚಿಕನ್ ಅಲ್ಲ. ಬದಲಿಗೆ ಮಹಿಳಾ ಶಿಕ್ಷಕಿಯೊಬ್ಬರು ತಮ್ಮ ಮನೆಯಿಂದ ಮಾಡಿಕೊಂಡು ಬಂದಿದ್ದ ಸಸ್ಯಹಾರಿ ಆಹಾರ ಎಂದು ತಿಳಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಕುರಿತು ಇಲಾಖಾ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *