ಬೆಂಗಳೂರು: ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳ ಇಕ್ಕಳದಲ್ಲಿರುವ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಇದೀಗ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಸಂಕಷ್ಟ ಎದುರಾಗಿದೆ.
ಮೂರು ದಿನಗಳಿಂದ ಪರಮೇಶ್ವರ್ ಒಡೆತನದ ವಿದ್ಯಾಸಂಸ್ಥೆಗಳಿಂದ ಐಟಿ ದಾಳಿ ನಡೆಯುತ್ತಿದೆ. ಶುಕ್ರವಾರ ಐಟಿ ಇಲಾಖೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಹವಾಲಾ ಹಣದ ಬಗ್ಗೆ ಉಲ್ಲೇಖ ಮಾಡಿದೆ. ಹೀಗಾಗಿ ಹವಾಲಾ ವ್ಯವಹಾರ ಕಂಡು ಬಂದ ಹಿನ್ನೆಲೆಯಲ್ಲಿ ಇ.ಡಿ ಪ್ರಕರಣವನ್ನ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಪಿಎಂಎಲ್ ಎ ಕಾಯ್ದೆಯ ಅಡಿಯಲ್ಲಿ ಹವಾಲಾ ಹಣದ ತನಿಖೆಯನ್ನ ಇಡಿ ಮಾಡುತ್ತದೆ. ಹೀಗಾಗಿ ಪರಮೇಶ್ವರ್ ಗೆ ಇಡಿ ಸಂಕಷ್ಟ ಖಚಿತವಾಗಿದೆ. ಪರಮೇಶ್ವರ್ ಪ್ರಕರಣ ಇಡಿಗೆ ಹೋಗಬಹುದಾ ಎಂಬ ಚರ್ಚೆಗಳು ನಡೆದಿದ್ದವು. ಈ ಮಧ್ಯೆಯೇ ಐಟಿ ಅಧಿಕಾರಿಗಳು ತಮ್ಮ ಪ್ರಾಥಮಿಕ ತನಿಖಾ ವರದಿಗಳನ್ನು ಇಡಿ ಅಧಿಕಾರಿಗಳಿಗೆ ಸಲ್ಲಿಕೆ ಮಾಡಿದ್ದಾರೆ.
ಮೆಡಿಕಲ್ ಕಾಲೇಜಿನ ಸೀಟ್ ಬ್ಲಾಕ್ ಮಾಡಿ ಅಕ್ರಮ ವಸೂಲಿ, ಹಣ ವರ್ಗಾವಣೆ ಮಾಡಿರುವುದು, ಜೊತೆಗೆ ಭೂಮಿ ಖರೀದಿ ಮಾಡುವಲ್ಲಿ ಮುನಿರಾಮಯ್ಯ ಅವರಿಗೆ 2 ಕೋಟಿ ರೂ. ಹಣ ನೀಡಿರುವ ಎಲ್ಲಾ ಅಂಶಗಳನ್ನು ಐಟಿಯವರು ಇಡಿ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮೆಡಿಕಲ್ ಕಾಲೇಜಿಗೆ 500 ಕೋಟಿ ರೂ. ಸುರಿದು ತಗ್ಲಾಕ್ಕೊಂಡ ಮಾಜಿ ಡಿಸಿಎಂ

ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಕೂಡ ಪ್ರಾಥಮಿಕ ತನಿಖೆಯನ್ನು ಮಾಡುತ್ತಾರೆ. ಜಾರಿ ಪ್ರಕರಣ ಮಾಹಿತಿ ವರದಿ(ಇಸಿಐಆರ್) ನ್ನು ದಾಖಲಿಸಿಕೊಂಡು ಪರಮೇಶ್ವರ್ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಗಳಿವೆ. ಇದಕ್ಕೂ ಮೊದಲೇ ಇಡಿ ಅಧಿಕಾರಿಗಳು ಕೂಡ ದಾಳಿ ನಡೆಸಿದರೆ ಅಚ್ಚರಿಯಿಲ್ಲ.

Leave a Reply