– ಅನರ್ಹರು ಸ್ಪರ್ಧಿಸುವುದು ಬಹುತೇಕ ಖಚಿತ
– ಬಂಡಾಯ ಶಮನಗೊಳಿಸಿದ ಬಿಎಸ್‍ವೈ
ಬೆಂಗಳೂರು: ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಅನರ್ಹರ ಸ್ಪರ್ಧೆಗೆ ಅಡ್ಡಿಯಾಗಿದ್ದ ನಾಯಕರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪ ನೀಡಿದ್ದಾರೆ.
ಹೌದು. ಅತೃಪ್ತರ ವಿರುದ್ಧ ಅಸಮಾಧಾನ ಹೊರ ಹಾಕಿ ಟಿಕೆಟ್ ಕೇಳಿದ್ದ 8 ಮಂದಿಗೆ ನಿಗಮ ಮಂಡಳಿಗಳಿಗೆ ಅಧ್ಯಕ್ಷ/ ಉಪಾಧ್ಯಕ್ಷ ಸ್ಥಾನವನ್ನು ಸ್ಥಾನವನ್ನು ನೀಡುವ ಮೂಲಕ ಯಡಿಯೂರಪ್ಪ ಬಂಡಾಯ ಶಮನ ಮಾಡಿದ್ದಾರೆ.

ರಾಜ್ಯ ಸಚಿವ ದರ್ಜೆಯ ಸ್ಥಾನಮಾನದೊಂದಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವಿವಿಧ ನಿಗಮ/ ಮಂಡಳಿಗಳ ಅಧ್ಯಕ್ಷ/ ಉಪಾಧ್ಯಕ್ಷ ಸ್ಥಾನಕ್ಕೆ 8 ಮಂದಿಯನ್ನು ನೇಮಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಆದೇಶ ಪ್ರಕಟಿಸಿದ್ದಾರೆ. ಒಂದು ವೇಳೆ ಅನರ್ಹರ ವಿರುದ್ಧ ಸುಪ್ರೀಂ ತೀರ್ಪು ಪ್ರಕಟಿಸಿದರೆ ಅನರ್ಹರು ಸೂಚಿಸುವ ವ್ಯಕ್ತಿಗಳಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆಯಿದೆ.
ಯಾರಿಗೆ ಎಲ್ಲಿ ಹುದ್ದೆ?
ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ವಿರುದ್ಧ ರೆಬೆಲ್ ಆಗಿದ್ದ ಶರತ್ ಬಚ್ಚೇಗೌಡಗೆ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ಕೆ.ಆರ್.ಪುರಂದಲ್ಲಿ ಬೈರತಿ ಬಸವರಾಜ್ ಗೆ ಟಿಕೆಟ್ ವಿರೋಧಿಸಿದ್ದ ನಂದೀಶ್ ರೆಡ್ಡಿಗೆ ಬೆಂಗಳೂರು ಮಹಾನಗರ ಪಾಲಿಕೆ(ಬಿಎಂಟಿಸಿ) ಸಂಸ್ಥೆಯಲ್ಲಿ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ.
ವಿಜಯನಗರ ದಲ್ಲಿ ಆನಂದ ಸಿಂಗ್ ಬದಲು ತಮಗೆ ಟಿಕೆಟ್ ಬೇಕು ಎಂದಿದ್ದ ಹೆಚ್.ಆರ್.ಗವಿಯಪ್ಪ ಅವರನ್ನು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಗೋಕಾಕ್ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಬಯಸಿದ್ದ ಅಶೋಕ್ ನಿಂಗಯ್ಯಸ್ವಾಮಿ ಪೂಜಾರಿ ಅವರಿಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸಿಕ್ಕಿದರೆ, ಕಾಗವಾಡದಲ್ಲಿ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಸ್ಪರ್ಧೆಗೆ ವಿರೋಧಿಸಿದ್ದ ಭರಮಗೌಡ(ರಾಜು) ಕಾಗೆಗೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ಮಲಪ್ರಭಾ-ಘಟಪ್ರಭಾ ಯೋಜನೆ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಬಿಸಿ ಪಾಟೀಲ್ ಪ್ರತಿನಿಧಿಸುವ ಹಿರೇಕೆರೂರು ಕ್ಷೇತ್ರದ ಟಿಕೆಟ್ ಕೇಳಿದ್ದ ಯು ಬಿ ಬಣಕಾರ್ ಅವರಿಗೆ ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣಾ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದ್ದರೆ, ಯಲ್ಲಾಪುರ ಟಿಕೆಟ್ ಕೇಳಿದ್ದ ವಿಎಸ್ ಪಾಟೀಲ್ ಅವರನ್ನು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ.

Leave a Reply