ಮೈಲಾರಲಿಂಗಸ್ವಾಮಿಯ ಕಾರ್ಣಿಕ- ಸರ್ವರು ಎಚ್ಚರದಿಂದಿರಿ ಎಂದು ಭವಿಷ್ಯ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಸರಸ್ವತಿಪುರಂನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗಸ್ವಾಮಿಯ ಕಾರ್ಣಿಕ ಇಂದು ಮುಂಜಾನೆ ಸಂಪನ್ನಗೊಂಡಿದ್ದು, ಕಾರ್ಣಿಕ ನಡೆಯುವಾಗ ಸರ್ವರು ಎಚ್ಚರದಿಂದಿರಿ ಎಂದು ದಶರಥ ಪೂಜಾರರು ಎಚ್ಚರಿಸಿದ್ದಾರೆ.

ಇಂದು ಬೆಳಗ್ಗಿನ ಜಾವ 5 ಗಂಟೆಗೆ ಸರಸ್ವತಿಪುರಂನ ಮಹಾನವಮಿ ಬಯಲಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಯ್ಯನನ್ನ ಏರಿದ ಪೂಜಾರರು ಕಾರ್ಣಿಕದ ನುಡಿಗಳನ್ನಾಡಿದರು. ರಾಷ್ಟ್ರ ಮತ್ತು ರಾಜ್ಯದ ಆಗುಹೋಗುಗಳ ಮೇಲೆ ಶ್ರೀ ಮೈಲಾರಲಿಂಗಸ್ವಾಮಿ ದಶರಥ ಪೂಜಾರರ ಬಾಯಲ್ಲಿ ಬಂದ ಕಾರ್ಣಿಕದ ನುಡಿಗಳನ್ನಾಡಿದ್ದಾರೆ. ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಪಂಜರದ ಗಿಳಿಗಳು ಹಾರಿ ಹೋದಾವು. ಕಟ್ಟಿದ ಕೋಟೆ ಪರರದಾಯಿತು. ಉತ್ತಮ ಮಳೆ ಸುರಿಸಿದಾವು. ಸರ್ವರು ಎಚ್ಚರದಿಂದಿರಬೇಕು ಎಂದು ಹೇಳಿದರು.

ಮಹಾನವಮಿ ಬಯಲಿನಲ್ಲಿ ಮೈಲಾರಲಿಂಗ ಕುಣಿತ ಅದ್ಭುತವಾಗಿರುವುದನ್ನು ನೋಡಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ನಾ ಮುಂದು ತಾ ಮುಂದು ಎನ್ನುತ್ತಿರುತ್ತಾರೆ. ನಂತರ ಮೈಲಾರಲಿಂಗ ಸ್ವಾಮಿ ಪೂಜಾರರನ್ನು ಕಾರ್ಣಿಕ ನುಡಿಯಲು ಪ್ರೇರೆಪಿಸುತ್ತಿದ್ದಂತೆ ಗೊರವಯ್ಯನವರ ಢಮರುಗ ಶಬ್ದ ಎಂತವರನ್ನು ಭಕ್ತಿಯ ಅಲೆಯಲ್ಲಿ ತೇಲಿಸುತ್ತದೆ.

ಮಹಾನವಮಿ ಬಯಲಿನಲ್ಲಿ ಅಂಬನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ ಜಯಘೋಷ ಮೊಳಗಿಸಿ, ಕಾರ್ಣಿಕ ನುಡಿಯುವ ಸಮಯ ಬಂದಾಗ ಹುಟ್ಟಿದ ಕೂಸು ಸಹ ಅಳು ನಿಲ್ಲಿಸುತ್ತದೆ ಎಂಬ ಮಾತಿದೆ. ಇಲ್ಲಿ ನುಡಿಯುವ ಕಾರ್ಣಿಕ ಕೇಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಮೈಲಾರಲಿಂಗನ ಕಾರ್ಣಿಕ ಕೇಳಿ ಅಂಬನ್ನು ಹೊಡೆದಾಗ ದಸರಾ ಮುಕ್ತಾಯವಾಗುತ್ತದೆ.

Comments

Leave a Reply

Your email address will not be published. Required fields are marked *