ಹಿಮಾಲ್ ಅಡ್ವೈಸರಿ ಕಂಪನಿ ದೋಖಾ- ಅಧಿಕ ಬಡ್ಡಿ ಆಸೆ ತೋರಿಸಿ ಚಿಪ್ಪು ಕೊಟ್ಳು ವಂಚಕಿ

ಬೆಂಗಳೂರು: ಹಿಮಾಲ್ ಅಡ್ವೈಸರಿ ಕಂಪನಿ ಹೆಸರಿನಲ್ಲಿ ಸಾರ್ವಜನಿಕರಿಗೆ ಅಧಿಕ ಬಡ್ಡಿ ಆಸೆ ತೋರಿಸಿ ಅವರಿಂದ ಕೋಟ್ಯಂತರ ರೂ. ಹಣ ದೋಚಿಕೊಂಡು ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ಸಿಲಿಕಾನ್ ಸಿಟಿಯ ಆರ್.ಟಿ ನಗರದಲ್ಲಿ ನಡೆದಿದೆ.

ಹಿಮಾಲ್ ಅಡ್ವೈಸರಿ ಕಂಪನಿ ನಡೆಸುತ್ತಿದ್ದ ನಾಝಿಯಾ ಜನರ ಹಣಕ್ಕೆ ಮೋಸ ಮಾಡಿದ ಖತರ್ನಾಕ್ ಮಹಿಳೆ. ಜನರಿಗೆ ಅಧಿಕ ಬಡ್ಡಿ ನೀಡುವ ಆಸೆ ತೋರಿಸಿ ಕೋಟಿಗಟ್ಟಲೇ ಹೂಡಿಕೆ ಮಾಡಿಸಿಕೊಂಡ ನಾಝಿಯಾ ಈಗ ಎಸ್ಕೇಪ್ ಆಗಿದ್ದಾಳೆ. ಅಧಿಕ ಬಡ್ಡಿ ಆಸೆಯ ಕನಸು ಕಂಡು ಕೂತಿದ್ದ ಜನರಿಗೆ ಪಂಗನಾಮ ಹಾಕಿದ್ದಾಳೆ.

ಆರ್ ಟಿ ನಗರದಲ್ಲಿ ಹಿಮಾಲ್ ಅಡ್ವೈಸರಿ ಕಂಪನಿ ಎಂಬ ಹೆಸರಿನ ಕಚೇರಿಯಲ್ಲಿ ನಾಝಿಯಾ ತನ್ನ ವ್ಯವಹಾರ ನಡೆಸುತ್ತಿದ್ದಳು. 15 ರಿಂದ 20% ಬಡ್ಡಿ ಕೊಡುತ್ತೇನೆ ಹೂಡಿಕೆ ಮಾಡಿ ಎಂದು ಜನರನ್ನು ನಂಬಿಸುತ್ತಿದ್ದಳು. ಬ್ಯುಸಿನೆಸ್‍ನಲ್ಲಿ ನಿಮ್ಮ ಹಣ ತೊಡಗಿಸ್ತೀನಿ, ಟ್ರೇಡ್ ಮಾರ್ಕೆಟ್‍ನಲ್ಲೂ ನಿಮ್ಮ ಹಣ ಹೂಡಿ ಲಾಭ ಕೊಡುತ್ತೇವೆ ಎಂದಿದ್ದಳು. ಈಕೆ ಮಾತಿಗೆ ಮರುಳಾದ ಜನರು ಆಕೆಯನ್ನು ನಂಬಿ ಹಿಮಾಲ್ ಅಡ್ವೈಸರಿ ಕಂಪನಿಯಲ್ಲಿ ಹಣ ಹೂಡುತ್ತಿದ್ದರು. ಬಡ್ಡಿ ಆಸೆಗೆ ನಾ ಮುಂದು ತಾ ಮುಂದು ಎಂದು ಜನರು ಹೂಡಿಕೆ ಮಾಡಿದರು. ಮೊದಲ ಒಂದೆರಡು ತಿಂಗಳು ನಾಝಿಯಾ ಹೂಡಿಕೆದಾರರಿಗೆ ಹಣವನ್ನು ನೀಡಿದ್ದಾಳೆ. ಹೀಗೆ ವಿಶ್ವಾಸ ಗಿಟ್ಟಿಸಿಕೊಂಡು ಅವರ ಸ್ನೇಹಿತರಿಗೂ ಕಂಪನಿಯಲ್ಲಿ ಹೂಡಿಕೆ ಮಾಡಲು ಹೇಳಿ ಎಂದು ಬಲೆ ಬೀಸುತ್ತಿದ್ದಳು.

5 ಲಕ್ಷ ಹೂಡಿದರೆ 5 ತಿಂಗಳಿಗೆ ಬಡ್ಡಿ ಜೊತೆ ಆಲ್ಟೋ ಕಾರನ್ನೂ ಕೊಡೋದಾಗಿ, 50 ಲಕ್ಷ ಹೂಡಿಕೆ ಮಾಡಿದರೆ ಬೆಂಗಳೂರಲ್ಲಿ ಒಂದು ಫ್ಲಾಟ್ ಆಫರ್ ನೀಡ್ತೀನಿ ಹೂಡಿಕೆದಾರರಿಗೆ ನಾಝಿಯಾ ನಂಬಿಸಿದ್ದಳು. ಕೆಲ ದಿನ ಸರಿಯಾಗಿ ವ್ಯವಹಾರ ಮಾಡಿ, ಬಳಿಕ ವಂಚಕಿ ತನ್ನ ಅಸಲಿ ಮುಖವನ್ನ ಜನರಿಗೆ ತೋರಿಸಿದ್ದಾಳೆ. ತಮ್ಮ ಹಣ ಕೇಳೋಕೆ ಹೋದವರ ಮೇಲೆ ರೌಡಿಗಳನ್ನ ಬಿಟ್ಟು ಬೆದರಿಕೆ ಹಾಕಿಸಿದ್ದಾಳೆ.

ಅಷ್ಟೇ ಅಲ್ಲದೆ ಹೂಡಿಕೆದಾರರು ಕೊಟ್ಟಿರುವ ಹಣ ಕೇಳಿದರೆ ಟಾರ್ಚರ್ ಕೊಡ್ತಿದ್ದಾರೆ ಎಂದು ವಂಚಕಿ ಪೊಲೀಸರಿಗೆ ಕಂಪ್ಲೆಂಟ್ ಕೂಡ ಕೊಟ್ಟಿದ್ದಾಳೆ. ಅದೆಷ್ಟೋ ಅಮಾಯಕರು ನಾಝಿಯಾಳ ಮಾತಿಗೆ ಮರುಳಾಗಿ ಹಣ ಹೂಡಿ ಬೀದಿಗೆ ಬಂದಿದ್ದಾರೆ. ಸದ್ಯ ಆರ್.ಟಿ ನಗರ ಕಚೇರಿಗೆ ಬೀಗ ಹಾಕಿ ಎಸ್ಕೇಪ್ ಆಗಿರುವ ನಾಝಿಯಾ ವಿರುದ್ಧ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ನೊಂದವರು ದೂರು ನೀಡಿದ್ದು, ವಂಚಕಿಯನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *