ಛೋಟಾ ರಾಜನ್ ಸಹೋದರನಿಗೆ ಬಿಜೆಪಿ ಮೈತ್ರಿಯಿಂದ ವಿಧಾನಸಭೆ ಟಿಕೆಟ್

ಮುಂಬೈ: ಭೂಗತ ಪಾತಕಿ ಛೋಟಾ ರಾಜನ್ ಸಹೋದರನಿಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಮಿತ್ರ ಪಕ್ಷವಾದ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ವಿಧಾನಸಭೆಗೆ ಟಿಕೆಟ್ ನೀಡಲಾಗಿದೆ.

ಜೈಲಿನಲ್ಲಿರುವ ಭೂಗತ ಪಾತಕಿ ಛೋಟಾ ರಾಜನ್ ಸಹೋದರ ದೀಪಕ್ ನಿಕಾಲ್ಜೆ ಅವರನ್ನು ಬಿಜೆಪಿ, ಶಿವಸೇನಾ ಮತ್ತು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಸೇರಿ ಜಂಟಿ ಅಭ್ಯರ್ಥಿಯನ್ನಾಗಿ ಮಾಡಿ ಕಣಕ್ಕೆ ಇಳಿಸಲಿದ್ದಾರೆ. ದೀಪಕ್‍ಗೆ ಪಶ್ಚಿಮ ಮಹಾರಾಷ್ಟ್ರದ ಫಾಲ್ಟನ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.

ಆಕ್ಟೋಬರ್ 21 ರಂದು ಮಹಾರಾಷ್ಟ್ರದ ವಿಧಾನ ಸಭಾ ಚುನಾವಣೆಗೆ ಬಿಜೆಪಿ, ಶಿವಸೇನಾ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಸೇರಿ ಸಮ್ಮಿಶ್ರ ಮಾಡಿಕೊಂಡು ಸೀಟನ್ನು ಹಂಚಿಕೆ ಮಾಡಿಕೊಂಡಿವೆ. ಇದರಲ್ಲಿ ಕೇಂದ್ರ ಸಚಿವ ರಾಮದಾಸ್ ಅಠವಾಳೆ ನೇತೃತ್ವದ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ ಆರು ಸೀಟುಗಳನ್ನು ನೀಡಲಾಗಿದೆ.

ಸಮ್ಮಿಶ್ರ ಪಕ್ಷಗಳಿಂದ ಹಂಚಿಕೆಯಾಗಿರುವ ಸೀಟುಗಳನ್ನು ಇಂದು ರಾಮದಾಸ್ ಅಠವಾಳೆ ತಮ್ಮ ಪಕ್ಷದ ಕೆಲ ಮುಖಂಡರಿಗೆ ಹಂಚಿಕೆ ಮಾಡಿದ್ದು, ಇದರಲ್ಲಿ ಫಾಲ್ಟನ್ ಕ್ಷೇತ್ರದಿಂದ ಛೋಟಾ ರಾಜನ್ ಸಹೋದರ ದೀಪಕ್ ನಿಕಾಲ್ಜೆ ಟಿಕೆಟ್ ನೀಡಿದ್ದಾರೆ. ಹಲವಾರು ವರ್ಷಗಳಿಂದ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದಲ್ಲಿ ಗುರುತಿಸಿಕೊಂಡಿರುವ ದೀಪಕ್ ಗೆ ಈ ಹಿಂದೆ ಮುಂಬೈನ ಚೆಂಬೂರಿನಿಂದ ಈ ಪಕ್ಷ ಟಿಕೆಟ್ ನೀಡಿತ್ತು. ಆದರೆ ದೀಪಕ್ ಆ ಚುನಾವಣೆಯಲ್ಲಿ ಸೋತಿದ್ದರು.

ಈ ಕ್ಷೇತ್ರವನ್ನು ಬಿಟ್ಟರೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಸೋಲಾಪುರ ಜಿಲ್ಲೆಯ ಮಲ್ಶಿರಾಸ್, ನಾಂದೇಡ್ ಜಿಲ್ಲೆಯ ಭಂಡಾರ ಮತ್ತು ನೈಗಾಂವ್, ಪರಭಾನಿಯ ಪಾತ್ರಿ ಮತ್ತು ಮುಂಬೈನ ಮನ್ಖುರ್ಡ್-ಶಿವಾಜಿ ನಗರ ಕ್ಷೇತ್ರದಿಂದ ಉಳಿದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

Comments

Leave a Reply

Your email address will not be published. Required fields are marked *