ಅಪ್ರಾಪ್ತೆಯನ್ನು ಅಪಹರಿಸಿ, ಬಂಧಿಸಿಟ್ಟು 3 ದಿನಗಳ ಕಾಲ ಗ್ಯಾಂಗ್ ರೇಪ್

ಚಂಡೀಗಢ: ಅಪ್ರಪ್ತ ಬಾಲಕಿಯೊಬ್ಬಳನ್ನು ಆಕೆಯ ಮನೆ ಮುಂದೆಯೇ ಅಪಹರಿಸಿದ 4 ಮಂದಿ ಯುವಕರು, ಆಕೆಯನ್ನು ಬಂಧಿಸಿಟ್ಟು, ಸತತ 3 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಮಾಡಿದ ನಾಚಿಕೆಗೇಡಿ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

ಪಂಜಾಬ್‍ನ ಬರ್ನಾಲಾ ಜಿಲ್ಲೆಯ ಮೌರ್ ನಭಾ ಗ್ರಾಮದ 12 ವರ್ಷದ ಬಾಲಕಿಯನ್ನು ಅದೇ ಗ್ರಾಮದ 4 ಮಂದಿ ಯುವಕರು ಅಪಹರಿಸಿದ್ದರು. ಸೆ. 29ರಂದು ಬಾಲಕಿಯ ಮನೆಯ ಮುಂಭಾಗದಲ್ಲೇ ಆಕೆಯನ್ನು ಅಪಹರಿಸಿ, ಕೋಣೆಯೊಂದರಲ್ಲಿ ಬಂಧಿಸಿಟ್ಟಿದ್ದರು. ಅಲ್ಲದೆ ಸತತ ಮೂರು ದಿನಗಳ ಕಾಲ ಆಕೆಯ ಮೇಲೆ ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಾಲಕಿ ನಾಪತ್ತೆಯಾದ ಬಗ್ಗೆ ಬಾಲಕಿ ಪೋಷಕರು ಪೊಲೀಸರಿಗೆ ದೂರನ್ನು ಕೂಡ ನೀಡಿದ್ದರು. ಆದರೆ ಪೊಲೀಸರು ಈ ಬಗ್ಗೆ ನಿರ್ಲಕ್ಷ್ಯ ತೋರಿ, ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ಮೂರು ದಿನಗಳ ನಂತರ ದುಷ್ಟರಿಂದ ತಪ್ಪಿಸಿಕೊಂಡು ಬಂದ ಬಾಲಕಿ, ಕುಟುಂಬದವರ ಮುಂದೆ ನೋವು ತೋಡಿಕೊಂಡಿದ್ದಾಳೆ. ಹೀನಾಯ ಸ್ಥಿತಿಗೆ ತಲುಪಿದ್ದ ಬಾಲಕಿಯನ್ನು ಪೋಷಕರು ಮೊದಲು ಆಸ್ಪತ್ರೆಗೆ ಸೇರಿಸಿ, ಬಳಿಕ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

ನಾಲ್ವರು ಆರೋಪಿಗಳಲ್ಲಿ ಓರ್ವ ಆರೋಪಿಯನ್ನು ಮೌರ್ ನಭಾ ಗ್ರಾಮದ ನಿವಾಸಿ ಗುರ್‌ಪ್ರೀತ್‌ ಸಿಂಗ್ ಎಂದು ಬಾಲಕಿ ಗುರುತಿಸಿದ್ದು, ಇನ್ನುಳಿದವರ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭರವಸೆ ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *