ಪ್ರತಾಪ್ ಸಿಂಹ ಮಾತ್ರವಲ್ಲ, ಶ್ರೀಸಾಮಾನ್ಯರಿಗೂ ಭಾಷೆ ಬಳಸುವಾಗ ಜ್ಞಾನ ಇರಬೇಕು – ಡಿಸಿಎಂ ಕಾರಜೋಳ ಟಾಂಗ್

ಬಾಗಲಕೋಟೆ: ಸಂಸದ ಪ್ರತಾಪ್ ಸಿಂಹ ಮಾತ್ರವಲ್ಲ, ಶ್ರೀಸಾಮಾನ್ಯರಿಗೂ ಸಹ ಭಾಷೆ ಬಳಸುವಾಗ ಜ್ಞಾನ ಇರಬೇಕು ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪರಿಹಾರಕ್ಕಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಾಪ್ ಸಿಂಹ ಅವರೊಬ್ಬರೇ ಅಲ್ಲ, ಶ್ರೀಸಾಮಾನ್ಯರೂ ಸಹ ಭಾಷೆ ಬಳಸುವಾಗ ಜ್ಞಾನ ಇರಬೇಕು. ಭಾಷೆ ಬಳಸುವಾಗ ಎಚ್ಚರವಹಿಸಬೇಕು. ಮನಬಂದಂತೆ ಮಾತನಾಡಬಾರದು ಎಂದು ತಿರುಗೇಟು ನೀಡಿದರು.

ಕೇಂದ್ರ ಸರ್ಕಾರ ನಿಶ್ಚಿತವಾಗಿಯೂ ಪರಿಹಾರ ಹಣ ಕೊಡುತ್ತದೆ. ಅದರಲ್ಲಿ ಯಾವುದೇ ಅನುಮಾನ ಮಾಧ್ಯಮದ ಮಿತ್ರರಿಗೆ ಬೇಡ. ಈಗಾಗಲೇ ಸರ್ವೆ ಕಾರ್ಯ ಆಗಿದೆ. ಕೇಂದ್ರ ಸರ್ಕಾರದ ಹಣಕಾಸು ಸಚಿವರು ಹಾಗೂ ಗೃಹ ಸಚಿವರು ಎಲ್ಲರೂ ನೋಡಿಕೊಂಡು ಹೋಗಿದ್ದಾರೆ. ಖಂಡಿತವಾಗಿಯೂ ಬೇರೆ ಕಾರಣಗಳಿಂದಾಗಿ ಪರಿಹಾರ ನೀಡುವಲ್ಲಿ ಸ್ವಲ್ಪ ವಿಳಂಬ ಆಗಿರಬಹುದು. ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕೇಂದ್ರದ ಪರಿಹಾರ ಅಗತ್ಯವಿಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಕೇಂದ್ರ ಸರ್ಕಾರದಿಂದ ನಮಗೆ ಹೆಚ್ಚಿನ ಪರಿಹಾರ ಸಿಗಬೇಕು. ಕಾನೂನಾತ್ಮಕವಾಗಿ ಅಲ್ಲದೇ ಹೆಚ್ಚಿನ ತೊಂದರೆ ಇರುವುದರಿಂದ ಪರಿಹಾರ ಸಿಗಬೇಕು. ಕೇಂದ್ರ ಸರ್ಕಾರದ ಅನುದಾನ ಸಹಾಯ ಸಹಕಾರ ಅವಶ್ಯಕವಾಗಿದೆ ಎಂದು ತೇಜಸ್ವಿಸೂರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಯಡಿಯೂರಪ್ಪನವರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂಬ ಪಂಚಮಸಾಲಿ ಶ್ರೀಗಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಇವೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *