ಬೆಂಗ್ಳೂರಿನಲ್ಲಿ ವರುಣನ ಅಬ್ಬರಕ್ಕೆ ಧರೆಗೆ ಉರುಳಿದ ಮರಗಳು

ಬೆಂಗಳೂರು: ನಗರದಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ವಿವಿಧೆಡೆ ನಾಲ್ಕು ಮರಗಳು ಧರೆಗೆ ಉರುಳಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ನಗರದ ಎಂಜಿ ರೋಡ್, ಶಿವಾಜಿ ನಗರ, ವಿಧಾನಸೌಧ, ಬಸವನಗುಡಿ, ಜೆಪಿ ನಗರ, ಓಲ್ಡ್ ಏರ್ಪೋಟ್ ರೋಡ್, ದೊಮ್ಮಲೂರು, ಮಲ್ಲೇಶ್ವರಂ, ಹೆಬ್ಬಾಳ, ಕನ್ನಿಂಗ್ ಹ್ಯಾಮ್ ರೋಡ್‍, ಯಶವಂತಪುರ ಸೇರಿದಂತೆ ವಿವಿಧೆಡೆ ವರುಣ ಅಬ್ಬರಿಸಿದ್ದಾನೆ. ಪರಿಣಾಮ ರಸ್ತೆ ಮೇಲೆ ನೀರು ನಿಂತು ವಾಹನ ಚಾಲಕರು ಹಾಗೂ ಸವಾರರು ಪರದಾಡುವಂತಾಯಿತು. ಅಷ್ಟೇ ಅಲ್ಲದೆ ಪ್ಯಾಲೇಸ್ ರಸ್ತೆಯ ಅಂಡರ್ ಪಾಸ್‍ನಲ್ಲಿ ಮಳೆ ನೀರು ತುಂಬಿದಿದ್ದರಿಂದ ರಸ್ತೆ ದಾಟಲು ಸವಾರರು ಹರ ಸಾಹಸ ಪಡುವಂತಾಯಿತು.

ಬುಲ್ ಟೆಂಪಲ್ ರೋಡ್‍ನಲ್ಲಿ ಎರಡು ಮರಗಳು, ಜೆಸಿ ರೋಡ್‍ನಲ್ಲಿ ಒಂದು ಮರ ಹಾಗೂ ಕೋರಮಂಗಲದಲ್ಲಿ ಒಂದು ಮರ ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದರು.

ಮೆಜೆಸ್ಟಿಕ್‍ನಲ್ಲಿ ಸಂಜೆ 7 ಗಂಟೆ ಸುಮಾರಿಗೆ ಮಳೆ ಸುರಿಯಲು ಆರಂಭಿಸಿದ್ದರಿಂದ ಪ್ರಯಾಣಿಕರು ಹಾಗೂ ರಸ್ತೆ ಬದಿಯ ವ್ಯಾಪಾರಿಗಳು ಪರದಾಡುವಂತಾಯಿತು. ಇತ್ತ ಎಚ್‍ಎಸ್‍ಆರ್ ಲೇಔಟ್‍ನ ರಸ್ತೆಗಳು ತುಂಬಿ ಹರಿಯುತ್ತಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

Comments

Leave a Reply

Your email address will not be published. Required fields are marked *