ನಡುರಸ್ತೆಯಲ್ಲೇ ಹೊತ್ತಿ ಉರಿದ 30 ಮಂದಿ ಪ್ರಯಾಣಿಕರಿದ್ದ ಬಸ್

ಹಾಸನ: ಚಲಿಸುತ್ತಿದ್ದ ಬಸ್‍ವೊಂದಕ್ಕೆ ಬೆಂಕಿ ಹತ್ತಿಕೊಂಡು ಧಗಧಗನೆ ಉರಿದಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಬೆಂಗಳೂರಿನಿಂದ ಬೈಂದೂರುಗೆ ಪ್ರಯಾಣ ಮಾಡುತ್ತಿದ್ದ ಕೆಎ 20 ಡಿ 6676 ನಂಬರಿನ ಖಾಸಗಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಶನಿವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹಾಸನದ ಶಾಂತಿಗ್ರಾಮಕ್ಕೆ ತಲುಪಿದೆ. ಇದೇ ವೇಳೆ ಬೆಳಗಿನ ಜಾವ ಸುಮಾರು 2:30ಕ್ಕೆ ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನಿದ್ರೆಯಲ್ಲಿದ್ದ ಪ್ರಯಾಣಿಕರಿಗೆ ಯಾವುದರ ಅರಿವು ಇರಲಿಲ್ಲ.

ತಕ್ಷಣ ಸಮಯ ಪ್ರಜ್ಞೆ ಮೆರೆದಿರುವ ಚಾಲಕ ಬಸ್ಸಿಗೆ ಬೆಂಕಿ ಹತ್ತಿಕೊಂಡಿರುವುದನ್ನು ಗಮನಿಸಿ ಪ್ರಯಾಣಿಕರನ್ನು ಬಸ್‍ನಿಂದ ಕೆಳಗಿಳಿಸಿದ್ದಾನೆ. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಈ ಪ್ರತಿದಿನ ಈ ಬಸ್ ಬೆಂಗಳೂರು ಮತ್ತು ಬೈಂದೂರಿಗೆ ಸಂಚಾರ ಮಾಡುತ್ತಿತ್ತು. ಬಸ್ಸಿನಲ್ಲಿ ಸುಮಾರು 30 ಜನ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಸದ್ಯಕ್ಕೆ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಂಕಿ ಅವಘಡಕ್ಕೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಜೊತೆಗೆ ಬಸ್ಸಿನಲ್ಲಿ ಸಾಗಿಸುತ್ತಿದ್ದ ಸರಕು, ವಸ್ತುಗಳು ಸಹ ಸುಟ್ಟುಹೋಗಿದೆ. ಪ್ರಯಾಣಿಕರನ್ನು ಬದಲಿ ವ್ಯವಸ್ಥೆ ಮುಖಾಂತರ ಅಲ್ಲಿಂದ ಕಳುಹಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸದ್ಯಕ್ಕೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *