-ವಾಪಸ್ ಬರಲ್ಲ ಸಾರಿ ಬೈ – ಪ್ರೇಯಸಿಗೆ ಸಂದೇಶ
ಬಾಗಲಕೋಟೆ: ಹೆತ್ತವರ ಒತ್ತಾಯದ ಹಿನ್ನೆಲೆಯಲ್ಲಿ ಇಷ್ಟವಿಲ್ಲದ ಮದುವೆಗೆ ಮನನೊಂದ ಯುವಕ ಪತ್ರ ಬರೆದು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಕೆ.ಡಿಯಲ್ಲಿ ನಡೆದಿದೆ.
ಸಂಗಮೇಶ್ ಹೊಳೆನ್ನವರ (22) ನಾಪತ್ತೆಯಾದ ಯುವಕ. ಈತ ಮುಧೋಳ ತಾಲೂಕಿನ ಹೆಬ್ಬಾಳ ಗ್ರಾಮದ ನಿವಾಸಿಯಾಗಿದ್ದು, ಶನಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದಾನೆ. ಆದರೆ ಚಿಚಖಂಡಿ ಕೆ.ಡಿ ಬಳಿಯ ಘಟಪ್ರಭಾ ನದಿ ಸೇತುವೆ ಬಳಿ ಯುವಕನ ಬೈಕ್ ಪತ್ತೆಯಾಗಿದೆ. ಹೀಗಾಗಿ ಯುವಕ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಪುರ ಪೊಲೀಸರು ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಜೊತೆಗೆ ಡೆತ್ ನೋಟನ್ನು ವಾಟ್ಸಪ್ ಸ್ಟೇಟಸ್ನಲ್ಲಿ ಹಾಕಿದ್ದಾನೆ. ಯುವಕನಿಗೆ ಇಷ್ಟವಿಲ್ಲದಿದ್ದರೂ ಅಕ್ಕನ ಮಗಳ ಜೊತೆ ಮದುವೆಗೆ ಮನೆಯವರು ಮುಂದಾಗಿದ್ದರು. ಆದರೆ ಯುವಕ ನನಗೆ ಈಗಲೇ ಮದುವೆ ಇಷ್ಟ ಇರಲಿಲ್ಲ. ನನ್ನ ಯಾವುದೇ ಕೆಲಸಕ್ಕೂ ಹೆತ್ತವರಿಂದ ಸಪೋರ್ಟ್ ಸಿಕ್ಕಿಲ್ಲ. ಪ್ರತಿ ಕೆಲಸದಲ್ಲೂ ಹೆತ್ತವರು ನನ್ನನ್ನು ಹೀಯಾಳಿಸುತ್ತಿದ್ದರು ಎಂದು ಡೆತ್ನೋಟ್ನಲ್ಲಿ ಬರೆದಿದ್ದಾನೆ.
ಡೆತ್ನೋಟ್ನಲ್ಲಿ ಏನಿದೆ?:
ನಾನು ಏನೇ ಮಾಡಬೇಕು ಅಂದುಕೊಂಡರು ಮನೆಯಲ್ಲಿ ಸಪೋರ್ಟ್ ಕೊಡುತ್ತಿರಲಿಲ್ಲ. ಒಂದು ಸಲ ನಾನು ಟಮ್ ಟಮ್ ತೆಗೆದುಕೊಂಡು ದುಡಿತ್ತೀನಿ ಎಂದೆ. ಆದರೆ ಅವರು ನನ್ನ ಬೈಕ್ ಮಾರಿಸಿ ಹೀಯಾಳಿಸುತ್ತಿದ್ದರು. ಆದರೂ ನಾನು ಸ್ವಂತವಾಗಿ ಏನಾದರೂ ಮಾಡಬೇಕು, ನೆಲೆ ಕಾಣಬೇಕು ಎಂದು ಪ್ರಯತ್ನ ಮಾಡಿದೆ. ಅದಕ್ಕೂ ಮನೆಯಬವರು ಕಲ್ಲು ಹಾಕಿದ್ದರು. ಹೀಗಾಗಿ ನಿಮ್ಮ ಮನೆಯಲ್ಲಿ ಮಕ್ಕಳು ದುಡಿತೀನಿ ಎಂದರೆ ಅವರಿಗೆ ಸಹಾಯ ಮಾಡಿ, ಛಲ ತುಂಬಿ. ನಮ್ಮ ಮನೆಯವರ ತರ ಮಾಡಬೇಡಿ ಎಂದಿದ್ದಾನೆ.

ಇನ್ನೂ ನನ್ನ ಪ್ರೇಯಸಿ ನೀ ಎಲ್ಲೆ ಇದ್ದರೂ ಚೆನ್ನಾಗಿರುತ್ತೀಯಾ ಅನ್ನೋ ನಂಬಿಕೆ ನನಗೆ ಇದೆ. ನಾನು ಯಾವಾಗಲೂ ನಿನ್ನ ಜೊತೆನೆ ಇರುತ್ತೀನಿ. ಆದರೆ ನಾನು ವಾಪಸ್ ಬರಲ್ಲ ಸಾರಿ ಎಂದು ತನ್ನ ಪ್ರಿಯತಮೆಗೆ ಸಾರಿ ಕೇಳಿದ್ದಾನೆ. ನನಗೆ ಜೀವನ ಅಂದರೆ ಏನು?, ಈ ಜೀವನದಲ್ಲಿ ಹೇಗೆ ಬದುಕಬೇಕು, ಇಲ್ಲಿ ಏನು ಇರಬೇಕು, ಇರಬಾರದು ಎಂದು ತೋರಿಸಿಕೊಟ್ಟ ನನ್ನ ಪ್ರೇಯಸಿಗೆ ನನ್ನ ವಂದನೆಗಳು.
ನನಗೂ ಜನ, ಸ್ನೇಹಿತರು ಇದ್ದಾರೆ ಎಂದು ತುಂಬಾ ಖುಷಿಯಾಗುತ್ತಿತ್ತು. ಆದರೆ ಯಾಕೋ ಈ ಜೀವನವೇ ಬೇಡವಾಗಿದೆ. ನನಗೆ ನೋವು, ದುಃಖ, ತುಂಬಾ ಸಂತೋಷವಾದಾಗ ನನ್ನ ಜೊತೆ ನೀನು ನಿಂತು ಧೈರ್ಯ ತುಂಬಿದೆ. ನನ್ನ ಸ್ನೇಹಿತರಿಗೆ ವಂದನೆಗಳು, ನನ್ನ ಜೀವನದಲ್ಲಿ ಅತಿ ಹೆಚ್ಚು ಗೌರವಿಸುವುದು ನನ್ನ ಸ್ನೇಹಿತರನ್ನು ಮಾತ್ರ, ಬಾಯ್ ಅಣ್ತಮ್ಮಾಸ್…ಎಂದು ಡೆತ್ನೋಟ್ ಬರೆದು ನಾಪತ್ತೆಯಾಗಿದ್ದಾನೆ.

Leave a Reply