ಕಾಂಗ್ರೆಸ್ ಜೊತೆ ಕೆಪಿಜೆಪಿ ವಿಲೀನವಾಗಿದ್ದಕ್ಕೆ ಶಂಕರ್ ಮೇಲೆ ಕ್ರಮ – ಸಿಬಲ್ ವಾದ ಹೀಗಿತ್ತು

ನವದೆಹಲಿ: ಕೆಪಿಸಿಸಿ ಪರ ವಕೀಲ ಕಪಿಲ್ ಸಿಬಲ್ ಅವರು ಇಂದು ದೀರ್ಘವಾಗಿ ಒಂದೊಂದೇ ವಿಚಾರವನ್ನು ಎತ್ತಿ ಕೋರ್ಟ್ ಮುಂದೆ ಇಡುತ್ತಿದ್ದರು.

ಅನರ್ಹ ಶಾಸಕರ ವಿರುದ್ಧ ಸ್ಪೀಕರ್ ಕೈಗೊಂಡ ನಿರ್ಧಾರವನ್ನು ಆರಂಭದಲ್ಲಿ ಸಮರ್ಥಿಸಿಕೊಂಡ ಅವರು ನಂತರ ಶಂಕರ್ ಅವರನ್ನು ಅನರ್ಹತೆ ಮಾಡುವಲ್ಲೂ ರಮೇಶ್ ಕುಮಾರ್ ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.

ಕೆಪಿಜೆಪಿ ಕಾಂಗ್ರೆಸ್‍ನೊಂದಿಗೆ ವಿಲೀನ ಆಗಿದೆ. ವೀಲಿನದ ಬಳಿಕ ಕಾಂಗ್ರೆಸ್ ಪಕ್ಷದಿಂದ ಶಂಕರ್ ಸಚಿವರಾಗಿದ್ದರು. ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‍ನೊಂದಿಗೆ ವಿಲೀನ ಆದ ಹಿನ್ನೆಲೆ ಅನರ್ಹ ಮಾಡಬಹುದು. ವಿಲೀನದ ಬಗ್ಗೆ ಸ್ಪೀಕರ್ ಕಚೇರಿಗೆ ಮಾಹಿತಿ ನೀಡಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಆರ್.ಶಂಕರ್ ಪತ್ರ ನೀಡಿದ್ದರು. ಆದರೆ ನ್ಯಾಯಾಲಯಕ್ಕೆ ಯಾವುದೇ ದಾಖಲೆ ಸಲ್ಲಿಸಿಲ್ಲ ಅಂತ ಹೇಳುತ್ತಿದ್ದಾರೆ ಎಂದು ಸಿಬಲ್ ವಾದಿಸಿದರು. ತಮ್ಮ ಕೇಸ್ ಬರುದ್ದಂತೆ ಆರ್.ಶಂಕರ್ ಎದ್ದು ನಿಂತು ವಾದ ಆಲಿಸುತ್ತಿದ್ದರು.

ಶಂಕರ್ ಯಾರಿಗೆ ಪತ್ರ ನೀಡಿದ್ದರು ಎಂದು ನ್ಯಾ.ಸಂಜಯ್ ಖನ್ನಾ ಪ್ರಶ್ನಿಸಿದರು. ಬಳಿಕ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಗೆ ಪತ್ರ ನೀಡಿದ್ದರು. ಈ ಪತ್ರದ ಆಧಾರದ ಮೇಲೆ ಸ್ಪೀಕರ್ ಅನರ್ಹ ಮಾಡುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕಾಂಗ್ರೆಸ್‍ಗೆ ಕೆಪಿಜೆಪಿ ವಿಲೀನವಾದ ಪ್ರಕ್ರಿಯೆಗಳ ವಿವರಣೆ, ಕುಮಾರಸ್ವಾಮಿ ಸರ್ಕಾರಕ್ಕೆ ಕಾಂಗ್ರೆಸ್ ಪ್ರತಿನಿಧಿಯಾಗಿ ಬೆಂಬಲ ನೀಡಿದ್ದರು. ಸಚಿವರೂ ಕೂಡ ಆಗಿದ್ದರು, ದಾಖಲೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಬುಧವಾರ ಸ್ಪೀಕರ್ ಪರ ವಕೀಲರು ವಿಲೀನದ ಯಾವುದೇ ದಾಖಲೆಗಳಿಲ್ಲ ಎಂದಿದ್ದರು ಅಲ್ವಾ ಎಂದು ನ್ಯಾಯಪೀಠವು ಪ್ರಶ್ನಿಸಿತು. ಈ ವೇಳೆ ಫೋಟೋ ಪ್ರದರ್ಶನ ಮಾಡಿದ ಸಿಬಲ್, ಆರ್.ಶಂಕರ್ ಕಾಂಗ್ರೆಸ್ ಸೇರಿದ ಹಲವು ದಾಖಲೆಗಳಿವೆ ಎಂದರು. ಆಗ ಸಿಬಲ್ ವಾದಕ್ಕೆ ಪ್ರತಿವಾದ ಮಂಡಿಸಿದ ಶಂಕರ್ ಪರ ವಕೀಲರು, ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರು. ಕೆಪಿಜೆಪಿಯಲ್ಲಿ ಉಳಿದಿದ್ದರು. ಕಾಂಗ್ರೆಸ್ ಕೆಪಿಜೆಪಿ ವಿಲೀನ ಆಗಿರಲಿಲ್ಲ. ಸ್ಪೀಕರ್ ಕಚೇರಿ ಕೂಡ ಯಾವುದೇ ಧೃಢಿಕರಣ ನೀಡಿಲ್ಲ. ಕಾಂಗ್ರೆಸ್ ಪಕ್ಷದಿಂದ ಸಚಿವರಾಗಿಲ್ಲ, ಕೆಪಿಜೆಪಿಯಿಂದಲೇ ಸಚಿವರಾಗಿದ್ದು, ಪಕ್ಷದ ಅಧ್ಯಕ್ಷರು ವಿಲೀನಕ್ಕೆ ಪತ್ರ ನೀಡಬೇಕು ಎಂದು ಹೇಳಿದರು.

ಡಾ.ಸುಧಾಕರ್ ರಾಜೀನಾಮೆ ಕೊಟ್ಟ ಬಳಿಕ ಸ್ಪೀಕರ್ ಕಚೇರಿಯಿಂದ ತೆರಳಿದ್ದೇ ಬಿಜೆಪಿ ನಾಯಕರ ಜೊತೆಗೆ. ಅವರು ರಾಜೀನಾಮೆ ನೀಡುವಾಗ ಸ್ಪೀಕರ್ ಕಚೇರಿ ಎದುರು ಗದ್ದಲವಾಗುತ್ತಿತ್ತು. ಆಗಲೂ ಅವರು ಗುರುತಿಸಿಕೊಂಡಿದ್ದು ಬಿಜೆಪಿ ನಾಯಕರ ಜೊತೆಗೆ. ಇವು ಪಕ್ಷಾಂತರ ಕಾಯಿದೆ ವ್ಯಾಪ್ತಿಗೆ ಬರುತ್ತವೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಗೈರಾಗಿದ್ದರು ಸಿಬಲ್ ವಾದಿಸಿದರು.

Comments

Leave a Reply

Your email address will not be published. Required fields are marked *