ಅನರ್ಹರು ಮನೆ ಅಳಿಯಂದಿರಂತೆ, ಸುಪ್ರೀಂ ಅವಕಾಶ ನೀಡಿದ್ರೆ ಅವರೇ ಅಭ್ಯರ್ಥಿಗಳು – ಈಶ್ವರಪ್ಪ

ಕಾರವಾರ: ಅನರ್ಹ ಶಾಸಕರು ಒಂದು ರೀತಿ ನಮ್ಮ ಮನೆ ಅಳಿಯಂದಿರಿದ್ದಂತೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅನರ್ಹ ಶಾಸಕರ ಪರ ಮತ್ತೆ ಬ್ಯಾಟಿಂಗ್ ಮಾಡಿದ್ದಾರೆ.

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರು ಚುನಾವಣೆಗೆ ನಿಲ್ಲುವಂತೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದರೆ ಅವರೇ ನಮ್ಮ ಅಭ್ಯರ್ಥಿಗಳು. ಇಲ್ಲವಾದರೆ ಅವರ ಜೊತೆ ಕೂತು ಚರ್ಚಿಸಿ ಅಭ್ಯರ್ಥಿಯನ್ನು ನಿರ್ಧಾರ ಮಾಡುತ್ತೇವೆ. ಮನೆ ಮಕ್ಕಳು ಕಡಿಮೆ ಇರುವುದರಿಂದ ಅಳಿಯಂದಿರು ಬಂದಿದ್ದಾರೆ ಎಂದು ಹೇಳುವ ಮೂಲಕ ಈಶ್ವರಪ್ಪ ಅವರು ಉಪಚುನಾವಣೆಯಲ್ಲಿ ಅನರ್ಹ ಶಾಸಕರ ನಿರ್ಣಯವೇ ಅಂತಿಮ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯನವರು ರಣ ಕಹಳೆ ಊದಿ ಊದಿ ನೆಗೆದು ಬಿದ್ದುಹೋಗಿದ್ದಾರೆ. ಚಾಮುಂಡೇಶ್ವರಿಯಲ್ಲೂ ಬಿದ್ದು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಇದೀಗ ವಿರೋಧ ಪಕ್ಷದ ನಾಯಕರಾಗಲು ಸರ್ಕಸ್ ಮಾಡುತಿದ್ದಾರೆ. ಅದೂ ಆಗದೇ ಇದ್ದಾಗ ಸೋನಿಯಾ ಗಾಂಧಿ ಮನೆ ಬಾಗಿಲು ತಟ್ಟಿದ್ದಾರೆ. ಅಲ್ಲದೆ, ಸರ್ಕಾರ ಇದ್ದಾಗ ಒಳಗೊಳಗೆ ಬಡಿದಾಡುತಿದ್ದ ಜೆಡಿಎಸ್-ಕಾಂಗ್ರೆಸ್ ಈಗ ಮುಖಾಮುಖಿಯಾಗಿ ಬಡಿದಾಡುತ್ತಿವೆ ಎಂದು ಸಿದ್ದರಾಮಯ್ಯ ಹಾಗೂ ಮೈತ್ರಿ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಸೀಟು ಕೇಳುವವರೇ ಗತಿಯಿಲ್ಲ. ಬಿಜೆಪಿ ದೇಶದಲ್ಲಿ ಅತಿಹೆಚ್ಚು ಬೆಳೆದಿದೆ ಹೀಗಾಗಿ ನಮ್ಮ ಪಕ್ಷದಲ್ಲಿ ಸೀಟು ಕೇಳುತ್ತಿದ್ದಾರೆ. ಇದರರ್ಥ ಬಂಡಾಯವಲ್ಲ, ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ನಮ್ಮ ಪಕ್ಷದವರೇ ಯಾರಾದರೂ ಸ್ಪರ್ಧಿಸಿದರೆ ಅದು ಬಂಡಾಯ ತಿಳಿಸಿದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಿದ್ದರಾಮಯ್ಯನವರ ಚೇಲಾರಂತೆ ವರ್ತಿಸಿದ್ದಾರೆ. ಶಾಸಕರನ್ನು ಅನರ್ಹ ಮಾಡಿದ್ದು ರಮೇಶ್ ಕುಮಾರ್ ಮಾಡಿದ ಅಕ್ಷಮ್ಯ ಅಪರಾಧ. ಸುಪ್ರೀಂ ಕೋರ್ಟ್‍ನಲ್ಲಿ ಅವರಿಗೆ ನ್ಯಾಯ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *