ಡಿಕೆಶಿ ಭೇಟಿ ಮಾಡಿದ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್

ನವದೆಹಲಿ: ದೆಹಲಿ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಭೇಟಿ ಮಾಡಿದ್ದಾರೆ.

ತಿಹಾರ್ ಜೈಲಿಗೆ ಭೇಟಿ ನೀಡಿದ್ದ ಅಹ್ಮದ್ ಪಟೇಲ್ ಅವರು ಡಿಕೆ ಶಿವಕುಮಾರ್ ಅವರಿಗೆ ಧೈರ್ಯ ತುಂಬಿದ್ದು, ಮುಂದಿನ ಕಾನೂನು ಹೋರಾಟದಲ್ಲಿ ಪಕ್ಷ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಎಂದು ಆಶ್ವಾಸನೆ ನೀಡಿರುವುದಾಗಿ ಮಾಹಿತಿ ಲಭಿಸಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ, ರಾಜ್ಯಸಭಾ ಸಂಸದ ಆನಂದ್ ಶರ್ಮಾ, ಸಹೋದರ ಡಿಕೆ ಸುರೇಶ್ ಕೂಡ ಹಾಜರಿದ್ದರು.

ಗುಜರಾತ್‍ನಲ್ಲಿ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆಲುವಿಗೆ ಡಿಕೆ ಶಿವಕುಮಾರ್ ಕಾರಣರಾಗಿದ್ದರು. ಆ ವೇಳೆ ಆಪರೇಷನ್ ಕಮಲ ಭೀತಿಯಲ್ಲಿದ್ದ ಕಾಂಗ್ರೆಸ್ ತನ್ನ ಶಾಸಕರನ್ನ ಗುಜರಾತ್‍ನಿಂದ ಬೆಂಗಳೂರಿನ ಈಗಲ್‍ಟನ್ ರೆಸಾರ್ಟಿಗೆ ಶಿಫ್ಟ್ ಮಾಡಿತ್ತು. ಈ ವೇಳೆ ಶಾಸಕರಿಗೆ ರಕ್ಷಣೆ ನೀಡಿ ಪಕ್ಷದ ಬೆನ್ನಿಗೆ ಡಿಕೆಶಿ ನಿಂತಿದ್ದರು. ಈ ಸಂದರ್ಭದಲ್ಲಿ ಡಿಕೆಶಿ ನಿವಾಸ ಸೇರಿದಂತೆ ಆಪ್ತರ ಮನೆಯ ಮೇಲೆ ಐಟಿ ದಾಳಿ ನಡೆಸಿತ್ತು. ಇದೇ ಪ್ರಕರಣದಲ್ಲಿ ಸದ್ಯ ಡಿಕೆಶಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಡಿಕೆಶಿ ತಂತ್ರಗಾರಿಕೆಯಿಂದ ಅಹ್ಮದ್ ಪಟೇಲ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಇಳಿಸಿದ್ದ ಅಭ್ಯರ್ಥಿಯನ್ನು ಸೋಲಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಅವರ ಮೇಲೆ ಐಟಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದರು.

ಇತ್ತ ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಿಹಾರ್ ಜೈಲಿಗೆ ಭೇಟಿ ನೀಡಿದ್ದರು. ಆದರೆ ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಭೇಟಿ ವೇಳೆ ಒಬ್ಬರ ಭೇಟಿಗಷ್ಟೇ ಅವಕಾಶವಿದ್ದ ಕಾರಣ ತಿಹಾರ್ ಜೈಲಿನಲ್ಲೇ ಇರುವ ಕಾಂಗ್ರೆಸ್ ನಾಯಕ ಚಿದಂಬರಂ ಅವರನ್ನು ಭೇಟಿ ಮಾಡಿ ವಾಪಸ್ಸಾಗಿದ್ದರು.

Comments

Leave a Reply

Your email address will not be published. Required fields are marked *