ಬೆಂಗಳೂರು: ರಾಜ್ಯ ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಯ ದಂಡದ ಮೊತ್ತ ಇಳಿಸಿದ್ದರೂ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಒಂದೇ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರು ಬರೋಬ್ಬರಿ 21.52 ಲಕ್ಷಕ್ಕೂ ಅಧಿಕ ದಂಡ ಸಂಗ್ರಹಿಸಿದ್ದಾರೆ.
ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಮಾಡಿ, ಕೇಂದ್ರ ಸರ್ಕಾರ ದುಬಾರಿ ದಂಡ ವಿಧಿಸಿತ್ತು. ಆದರೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದುಬಾರಿ ದಂಡಕ್ಕೆ ಬ್ರೇಕ್ ಹಾಕಿ, ದಂಡದ ಮೊತ್ತವನ್ನ ಇಳಿಸಿತ್ತು. ಈ ಬೆನ್ನಲ್ಲೇ ವಾಹನ ಸವಾರರು ತಮ್ಮ ಹಳೇ ಚಾಳಿಯನ್ನ ಮುಂದುವರಿಸಿದ್ದಾರೆ. 24 ಗಂಟೆಯಲ್ಲಿ ಅಂದರೆ ಮಂಗಳವಾರ ಒಂದೇ ದಿನಕ್ಕೆ 6,782 ಟ್ರಾಫಿಕ್ ನಿಯಮ ಉಲ್ಲಂಘನೆಯ ಪ್ರಕರಣಗಳು ಸಿಲಿಕಾನ್ ಸಿಟಿ ವಾಹನ ಸವಾರರಿಂದ ದಾಖಲಾಗಿವೆ.

ಈ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆಯ ಕೇಸ್‍ಗಳೇ ಹೆಚ್ಚು ದಾಖಲಾಗಿವೆ. ಬರೋಬ್ಬರಿ 1,546 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಇದರಿಂದ ಸುಮಾರು 2,87,500 ರೂ. ದಂಡ ಸಂಗ್ರಹವಾಗಿದೆ. ಹಿಂಬದಿ ಸವಾರ ಹೆಲ್ಮೆಟ್ ಧರಿಸದ ಪ್ರಕರಣಗಳು 1,046 ದಾಖಲಾಗಿದ್ದು, ಇದರಿಂದ 2,22,000 ರೂ. ದಂಡ ವಸೂಲಾಗಿದೆ.

806 ವಾಹನಗಳನ್ನು ತಪ್ಪಾಗಿ ಪಾರ್ಕಿಂಗ್ ಮಾಡಿದ ಪ್ರಕರಣಗಳು ದಾಖಲಾಗಿದ್ದು 1,66,100 ರೂ. ದಂಡವನ್ನು ವಾಹನ ಸವಾರರಿಂದ ಪೊಲೀಸರು ವಸೂಲಿ ಮಾಡಿದ್ದಾರೆ. ಸಿಗ್ನಲ್ ಜಂಪ್ 818 ಪ್ರಕರಣದಿಂದ 1,41,800 ರೂ., ನೋ ಎಂಟ್ರಿ ಪ್ರಕರಣಗಳು 355, ಅದರಿಂದ 1,03,800 ರೂ., ಅಲ್ಲದೆ ವಾಹನದಲ್ಲಿ ಉದ್ದದ ಸಾಮಾಗ್ರಿಗಳನ್ನು ಸಾಗಿಸಿದ 318 ಪ್ರಕರಣಗಳಿಂದ 3,18,100 ರೂ. ದಂಡ ಸಂಗ್ರಹಿಸಲಾಗಿದೆ.
ಸುಮಾರು 65 ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ 6,782 ಪ್ರಕರಣಗಳಿಂದ ಸಂಚಾರಿ ಪೊಲೀಸರು ಒಂದೇ ದಿನಕ್ಕೆ ಬರೋಬ್ಬರಿ 21,52,100 ರೂಪಾಯಿಯನ್ನು ದಂಡ ವಸೂಲಿ ಮಾಡಿದ್ದಾರೆ.

Leave a Reply