ಈಶ್ವರಪ್ಪ ಜೊತೆ ಕಾಣಿಸಿಕೊಂಡ ಜಿಟಿಡಿ

ಮೈಸೂರು: ಒಂದೆಡೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರನ್ನು ಟೀಕಿಸುತ್ತಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಇನ್ನೊಂದೆಡೆ ಬಿಜೆಪಿ ನಾಯಕರೊಂದಿಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಉಪಮುಖ್ಯಮಂತ್ರಿ ಕಾರಿನಲ್ಲೇ ಸುತ್ತಾಡಿದ್ದ ಜಿಟಿಡಿ ಇಂದು ಮೈಸೂರಿಗೆ ತೆರಳಿದ್ದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರನ್ನೂ ಭೇಟಿಯಾಗಿದ್ದಾರೆ.

ಈ ಮೂಲಕ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಬಿಜೆಪಿ- ಜೆಡಿಎಸ್ ನಾಯಕರ ಸಮಾಗಮವಾಗಿದ್ದು, ಈಶ್ವರಪ್ಪ ನಿರ್ಗಮನ ಸಂದರ್ಭದಲ್ಲಿ ಜಿಟಿಡಿ ಆಗಮಿಸಿದ್ದಾರೆ. ಈ ವೇಳೆ ದೇವಾಲಯದ ಆವರಣದಲ್ಲೇ ಈಶ್ವರಪ್ಪನವರಿಗೆ ಹೂಗುಚ್ಛ ನೀಡಿ ಜಿಟಿಡಿ ಸ್ವಾಗತಿಸಿದ್ದಾರೆ. ಈ ಮೂಲಕ ಜಿಟಿಡಿ ಬಿಜೆಪಿ ನಾಯಕರೊಂದಿಗೆ ನಿಕಟವಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ, ಅನರ್ಹ ಶಾಸಕರ ಪರಿಸ್ಥಿತಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ. ಸುಪ್ರೀಂ ಕೋರ್ಟ್ ತೀರ್ಪು ಅನರ್ಹ ಶಾಸಕರ ರಕ್ಷಣೆ ಮಾಡುವ ವಿಶ್ವಾಸವಿದೆ. ಅಭಿಪ್ರಾಯ ತಿಳಿಸಿ ಎಂದು ರಮೇಶ್ ಕುಮಾರ್ ಅವರಿಗೆ ಹೇಳಿದರೆ ಅನರ್ಹತೆ ಮಾಡಿ ಅತಂತ್ರ ಮಾಡಿದ್ದಾರೆ. ಮುಂದೆ ಅನರ್ಹ ಶಾಸಕರಿಗೆ ನ್ಯಾಯ ಸಿಗುತ್ತದೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಮೈತ್ರಿ ಬಗ್ಗೆ ಪ್ರತಿನಿತ್ಯ ಹೇಳಿಕೆಗಳು ಬರುತ್ತಿತ್ತು. ಜನ ವಿರೋಧಿ ಹಾಗೂ ವರ್ಗಾವಣೆ ದಂಧೆಯಿಂದ ಬೇಸತ್ತು ಶಾಸಕರು ರಾಜೀನಾಮೆ ಕೊಟ್ಟು ಹೊರಬಂದರು ಎಂದು ಅನರ್ಹ ಶಾಸಕರ ಪರ ಬ್ಯಾಟಿಂಗ್ ಮಾಡಿದ್ದಾರೆ.

ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಲ್ಲಿ ಗೊಂದಲವಿದೆ. ಮಲ್ಲಿಕಾರ್ಜುನ ಖರ್ಗೆ ಮೈತ್ರಿ ಬಗ್ಗೆ ಒಲವು ತೋರಿಸುತ್ತಿದ್ದಾರೆ. ದಿನೇಶ್ ಗುಂಡೂರಾವ್ ವಿರೋಧಿಸುತ್ತಿದ್ದಾರೆ. ಅನರ್ಹ ಶಾಸಕರು ರಾಜೀನಾಮೆ ನೀಡಿದ್ದರಿಂದ ನಮಗೆ ಬಹುಮತ ಸಿಕ್ಕಿದೆ. ಉಪಚುನಾವಣೆಯಲ್ಲಿ ಅವರ ಅಪೇಕ್ಷೆಗೆ ತಕ್ಕಂತೆ ಅವರು ನೀಡುವ ಬೆಂಬಲಕ್ಕೆ ತಕ್ಕಂತೆ ಚುನಾವಣೆ ಎದುರಿಸುತ್ತೇವೆ. ಎಲ್ಲ 15 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ. ಲೋಕಸಭೆ ಚುನಾವಣೆಯ ಫಲಿತಾಂಶದಂತೆ ಉಪಚುನಾವಣೆ ಫಲಿತಾಂಶವೂ ಬರಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *