ದಾಳಿಂಬೆಗೆ ಬಲಿ – ಉಸಿರುಗಟ್ಟಿ ಪುಟ್ಟ ಕಂದಮ್ಮ ಸಾವು

ಚಂಡೀಗಢ: ದಾಳಿಂಬೆ ಕಾಳು ಶ್ವಾಸಕೋಶದ ನಾಳದಲ್ಲಿ ಸಿಲುಕಿ ಮೂರು ವರ್ಷದ ಪುಟ್ಟ ಕಂದಮ್ಮ ಸಾವನ್ನಪ್ಪಿದ ಘಟನೆ ಹರ್ಯಾಣದ ಫರೀದಾಬಾದ್ ನಲ್ಲಿ ನಡೆದಿದೆ.

ಮೂರು ವರ್ಷದ ಯಶಿಕಾ (ಸೀತಾ) ದಾಳಿಂಬೆ ಕಾಳುಗಳಿಂದ ಕೊನೆಯುಸಿರೆಳೆದ ಮಗು. ಫರೀದಾಬಾದ್ ನಗರದ ಸೆಕ್ಟೆರ್ 30ರ ನಿವಾಸಿಯಾಗಿರುವ ಡೇವಿಡ್ ಬೈಸಲ್ ಮತ್ತು ಪೂನಂ ದಂಪತಿಯ ಪುತ್ರಿ ಯಶಿಕಾ. ಪುತ್ರಿ ಯಶಿಕಾಗೆ ತಾಯಿ ದಾಳಿಂಬೆ ಕಾಳುಗಳನ್ನು ನೀಡಿದ್ದರು. ಎರಡು ಕೈಗಳಿಂದ ದಾಳಿಂಬೆ ಕಾಳುಗಳನ್ನು ಯಶಿಕಾ ಬಾಯಿಗೆ ಹಾಕಿಕೊಂಡಿದ್ದಾಳೆ. ಕಾಳುಗಳು ಶ್ವಾಸಕೋಶದ ನಾಳದಲ್ಲಿ ಸಿಲುಕಿ ಉಸಿರುಗಟ್ಟಿ ಯಶಿಕಾ ಸಾವನ್ನಪ್ಪಿದ್ದಾಳೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಡೇವಿಡ್ ಅವರ ಮೂರು ಮಕ್ಕಳ ಪೈಕಿ ಯಶಿಕಾ ಚಿಕ್ಕವಳು. ಯಶಿಕಾ ತನ್ನ ಅಕ್ಕ ಮತ್ತು ಅಣ್ಣನೊಂದಿಗೆ ಆಟವಾಡುತ್ತಿದ್ದಾಗ ತಾಯಿ ದಾಳಿಂಬೆ ಹಣ್ಣು ಹಂಚಿಕೊಂಡು ತಿನ್ನುವಂತೆ ಹೇಳಿ ನೀಡಿದ್ದಾರೆ. ಇದೇ ವೇಳೆ ಸಂಬಂಧಿ ಮೀನಾಕ್ಷಿ ಮಕ್ಕಳು ಅವರೊಂದಿಗೆ ಆಡಲು ಸೇರಿಕೊಂಡಿದ್ದಾರೆ. ಈ ವೇಳೆ ದಾಳಿಂಬೆ ಕಾಳುಗಳಿಗಾಗಿ ಮಕ್ಕಳಲ್ಲಿ ಜಗಳ ಆರಂಭಗೊಂಡಿವೆ. ಜಗಳದ ನಡುವೆ ಎರಡು ಕೈ ತುಂಬಾ ದಾಳಿಂಬೆ ತೆಗೆದುಕೊಂಡು ಯಶಿಕಾ ಬಾಯಿಗೆ ಹಾಕಿಕೊಂಡಿದ್ದಾಳೆ. ದಾಳಿಂಬೆ ಬಾಯಿಗೆ ಹಾಕಿಕೊಂಡ ಬಳಿಕ ಒಂದು ಸಾರಿ ನಕ್ಕ ಯಶಿಕಾಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿವೆ.

ಮಗಳ ಸ್ಥಿತಿ ಕಂಡ ಪೂನಂ ಭಯಗೊಂಡು ಪತಿಗೆ ಫೋನ್ ಮಾಡಿ ವಿಷಯ ತಿಳಿಸಿ ನೆರೆಹೊರೆಯವರ ಸಹಾಯದಿಂದ ಯಶಿಕಾಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸ್ಥಳೀಯ ವೈದ್ಯರ ಸಲಹೆ ಮೇರೆಗೆ ಯಶಿಕಾಳನ್ನ ಸೆಕ್ಟರ್ 28ರಲ್ಲಿಯ ಶಂಕರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಸರ್ವೋದಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಆಸ್ಪತ್ರೆಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಯಶಿಕಾ ಸಾವನ್ನಪ್ಪಿದ್ದಾಳೆ.

ನಾನೇ ಅವಳಿಗೆ ಹಾಲು ಕೊಟ್ಟು ಕೆಲಸಕ್ಕೆ ಹೋಗಿದ್ದೆ. ಕೆಲಸಕ್ಕೆ ಹೋಗುವಾಗ ಮಕ್ಕಳು ಆಟವಾಡುತ್ತಿದ್ದರು, ಎಲ್ಲವೂ ಚೆನ್ನಾಗಿತ್ತು. ನೋಡ ನೋಡುತ್ತಿದ್ದಂತೆ ಯಶಿಕಾ ದಾಳಿಂಬೆ ಕಾಳುಗಳನ್ನು ಬಾಯಿಗೆ ಹಾಕಿಕೊಂಡಿದ್ದರಿಂದ ಉಸಿರಾಟದಲ್ಲಿ ತೊಂದರೆ ಆಗಿದೆ. ದಾಳಿಂಬೆ ಕಾಳುಗಳಿಂದ ಇಷ್ಟು ದೊಡ್ಡ ದುರಂತ ಸಂಭವಿಸುತ್ತೆ ಎಂದು ಗೊತ್ತಿರಲಿಲ್ಲ ಎಂದು ಡೇವಿಡ್ ಕಣ್ಣೀರು ಹಾಕುತ್ತಾರೆ.

Comments

Leave a Reply

Your email address will not be published. Required fields are marked *