ಬೀಫ್ ರಫ್ತಿನಲ್ಲಿ ದೇಶ ಮುಂಚೂಣಿಯಲ್ಲಿದೆ, ತಾಕತ್ತಿದ್ದರೆ ಈಶ್ವರಪ್ಪ ತಡೆಯಲಿ: ಉಗ್ರಪ್ಪ ಸವಾಲು

ಬೆಂಗಳೂರು: ಬೀಫ್(ದನದ ಮಾಂಸ) ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಈಶ್ವರಪ್ಪನವಗೆ ಧಮ್ಮು, ತಾಕತ್ತು ಇದ್ದರೆ ದೇಶದ ಬೀಫ್ ರಫ್ತನ್ನು ತಡೆಯಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಬಗ್ಗೆ ಉಡಾಫೆಯಾಗಿ ಮಾತನಾಡುವುದನ್ನು ಬಿಡಬೇಕು ಮಿಸ್ಟರ್ ಈಶ್ವರಪ್ಪ. ನಿನ್ನೆಯಷ್ಟೇ ಈಶ್ವರಪ್ಪನವರು ಬಿಜೆಪಿಗೆ ಮತ ಹಾಕದವರು ಪಾಕ್ ಪರ ಇರುತ್ತಾರೆ ಎಂದು ಹೇಳಿಕೆ ನೀಡಿದ್ದರು ಇದಕ್ಕೆ ಇಂದು ಉಗ್ರಪ್ಪ ತಿರುಗೇಟು ನೀಡಿದ್ದಾರೆ.

ಹಿಂದಿ ಹೇರಿಕೆ ಬಗ್ಗೆ ಅಮಿತ್ ಶಾ ಮಾತನಾಡಿದ್ದಾರೆ. ದೇಶದಲ್ಲಿ ಹಲವು ಭಾಷೆಗಳಿವೆ. ಗುಜರಾತಿ, ಕನ್ನಡ, ಮಲೆಯಾಳಿ, ತಮಿಳು, ತೆಲುಗು, ಅಸ್ಸಾಮಿ, ಪಂಜಾಬಿ ಸೇರಿ 22 ಭಾಷೆಗಳಿವೆ. ನಿಮ್ಮ ಗುಜರಾತಿ ಕೂಡ ಪ್ರಾಂತೀಯ ಭಾಷೆ. ಇದನ್ನು ನೋಡಿಯೂ ನೀವು ಹಿಂದಿ ಹೇರಿಕೆಗೆ ಹೊರಟಿದ್ದೇಕೆ, ವಿವಿಧತೆಯಲ್ಲಿ ಏಕತೆಯನ್ನು ಮುರಿಯೋಕೆ ನೋಡುತ್ತಿದ್ದೀರಾ, ಸಂವಿಧಾನದ ಬಗ್ಗೆ ನಿಮಗೆ ಗೌರವವಿದ್ದರೆ ಈ ನಿರ್ಧಾರವನ್ನು ಕೈಬಿಡಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರಿಗೆ ಮನುಷ್ಯತ್ವ ಇಲ್ಲ. ನೆರೆ ವಿಚಾರದಲ್ಲಿ ಒಂದು ರೂಪಾಯಿ ಪರಿಹಾರ ಬಿಡುಗಡೆ ಮಾಡಲಿಲ್ಲ. ಈಶ್ವರಪ್ಪ, ಮಾಧುಸ್ವಾಮಿ, ಲಕ್ಷ್ಮಣ ಸವದಿ ಬಳಸಿರುವ ಪದಗಳು ಅಧಿಕಾರದ ಮದ ನೆತ್ತಿಗೇರಿರುವುದನ್ನು ಸಾಬೀತುಪಡಿಸುತ್ತವೆ. ನಾನು ನೀಲಿ ಚಿತ್ರ ನೋಡಿದ್ದೇನಷ್ಟೇ. ಕಾಂಗ್ರೆಸ್ ಅವರು ನೀಲಿಚಿತ್ರ ಮಾಡುತ್ತಾರೆ ಎಂದು ಸವದಿ ಹೇಳಿದ್ದಾರೆ. ಯಾರು ಮಾಡುತ್ತಿದ್ದಾರೆ ಎಂದು ಬಹಿರಂಗ ಪಡಿಸಲಿ. ಒಬ್ಬ ಉನ್ನತ ಹುದ್ದೆಯಲ್ಲಿ ಇರುವವರಿಗೆ ಈ ರೀತಿ ಮಾತು ಜಾರಬಾರದು ಎಂದು ಎಚ್ಚರಿಸಿದ್ದಾರೆ.

ಬೆಳಗಾವಿಯಲ್ಲಿ ಅಧಿವೇಶನ ನಡೆಸಲೇ ಬೇಕು. ಅಲ್ಲಿ ಅಧಿವೇಶನ ನಡೆಸದಿದ್ದರೆ ಆ ಭಾಗದ ಜನರಿಗೆ ಸರ್ಕಾರ ಮೋಸ ಮಾಡಿದಂತೆ. ಅಲ್ಲದೆ, ಅನ್ಯಾಯ ಮಾಡಿದಂತೆ. ಇದು ಬಿಜೆಪಿಗರ ಮನಸ್ಥಿತಿಯನ್ನು ತೋರಿಸುತ್ತದೆ. ಅಲ್ಲದೆ, ಎಸ್‍ಇಪಿ, ಟಿಎಸ್‍ಪಿ ಹಣವನ್ನು ನೆರೆ ಪರಿಹಾರಕ್ಕೆ ಬಳಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಶೋಷಿತ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಡೈವರ್ಟ್ ಮಾಡಲು ಹೊರಟಿರುವುದು ಸರಿಯಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ. ಅತ್ಯಾಚಾರ ಸಂತ್ರಸ್ತರಿಗೆ, ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲು ಸಹ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *