ಚಾಲಕರಿಗೆ ಅವಧಿ ಮೀರಿದ ಮೆಡಿಕಲ್ ಕಿಟ್ ವಿತರಿಸಿದ ಕಾರ್ಮಿಕ ಇಲಾಖೆ

-ಕಿಟ್‍ಗಳ ಮೇಲೆ ಮಾಜಿ ಸಿಎಂ, ಸಚಿವರ ಹೆಸರೇ ಬದಲಾಗಿಲ್ಲ

ಗದಗ: ಅವಧಿ ಮೀರಿದ ಚಿಕಿತ್ಸೆ ಕಿಟ್‍ನ್ನು ಚಾಲಕರಿಗೆ ನೀಡಿ ಗದಗದಲ್ಲಿ ಕಾರ್ಮಿಕ ಇಲಾಖೆ ಪ್ರಮಾದ ಎಸಗಿದೆ. ಅವಧಿ ಮೀರಿದ ಕಿಟ್‍ಗಳನ್ನ ನೀಡಿದ ಗದಗ ಜಿಲ್ಲಾ ಕಾರ್ಮಿಕ ಇಲಾಖೆ ವಿರುದ್ಧ ಚಾಲಕರು ಗರಂ ಆಗಿದ್ದಾರೆ.

ಕಾರ್ಮಿಕ ಇಲಾಖೆಯಿಂದ ವಾಹನ ಚಾಲಕರಿಗೆ ನೀಡಿರೋ ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ಎಡವಟ್ಟಿನ ಕೆಲಸವಿದು. ಸಂಚರಿಸುವ ವೇಳೆ ಅಪಘಾತವಾದರೆ ಕೂಡಲೇ ಪ್ರಥಮ ಚಿಕಿತ್ಸೆ ನೀಡುವುದಕ್ಕಾಗಿ ಸರ್ಕಾರದಿಂದ ಎಲ್ಲಾ ವಾಹನ ಚಾಲಕರಿಗೆ ಮೆಡಿಕಲ್ ಕಿಟ್ ನೀಡಲಾಗುತ್ತದೆ. ಆದರೆ ಈ ಬಾಕ್ಸ್ ಮೇಲೆ ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಕಾರ್ಮಿಕ ಸಚಿವ ಸಂತೋಷ ಲಾಡ್ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನೀಡಿದ ಕಿಟ್‍ಗಳನ್ನ ಈಗ ವಿತರಿಸಿ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ. ಇದಕ್ಕೆ ಟ್ಯಾಕ್ಸಿ ಚಾಲಕರು ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾರ್ಮಿಕ ಇಲಾಖೆ ಪ್ರಕಾರ ಈಗಲೂ ಸಿದ್ದರಾಮಯ್ಯ ಮುಖ್ಯಮಂತ್ರಿ, ಕಾರ್ಮಿಕ ಹಾಗೂ ಕೌಶಲ್ಯಭಿವೃದ್ದಿ ಇಲಾಖೆಯ ಸಚಿವ ಸಂತೋಷ ಲಾಡ್ ಆಗಿದ್ದಾರೆ. ಇಷ್ಟು ದಿನ ಬಚ್ಚಿಟ್ಟಿದ್ದ ಕಿಟ್ ಈಗ ಟ್ಯಾಕ್ಸಿ ಚಾಲಕರಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಈ ಕಿಟ್‍ಗಳಲ್ಲಿ ಅವಧಿ ಮುಗಿದ ಔಷಧ ಇರುವುದು ವಿಪರ್ಯಾಸ. ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಯನ್ನು ಕೇಳಿದರೆ, ನಾನು ಹೊಸದಾಗಿ ಬಂದಿದ್ದೇನೆ. ನಾನು ಬರುವಾಗಲೇ ಈ ವಿತರಣಾ ಕಾರ್ಯಕ್ರಮ ಅವಧಿ ಫಿಕ್ಸ್ ಆಗಿತ್ತು. ಈಗ ಅವಧಿ ಮೀರಿದ ಕಿಟ್‍ಗಳನ್ನು ವಾಪಾಸ್ ತರೆಸಿಕೊಂಡು ಹೊಸಕಿಟ್ ನೀಡುತ್ತೇನೆ. ದಯವಿಟ್ಟು ಕ್ಷಮಿಸಿ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಸುಧಾ ಗರಗ ಅವರು ಕ್ಷಮೆಯಾಚಿಸಿದ್ದಾರೆ.

ಅದೇನೇ ಇರಲಿ ಕಾರ್ಮಿಕರ ಹಿತ ಕಾಪಾಡಬೇಕಾದ ಅಧಿಕಾರಿಗಳು ಅವಧಿ ಮುಗಿದ ಮೆಡಿಕಲ್ ಕಿಟ್ ನೀಡಿದರೆ ಹೇಗೆ ಎನ್ನುವುದೆ ಕಾರ್ಮಿಕರ ಪ್ರಶ್ನೆಯಾಗಿದೆ. ಬೇಜವಾಬ್ದಾರಿ ವರ್ತನೆ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಚಾಲಕರು ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *