ಎಷ್ಟು ದಿನ ಇರ್ತಿವೋ ಗೊತ್ತಿಲ್ಲ, ಇರಷ್ಟು ದಿನ ಜನಪರ ಕೆಲಸ ಮಾಡ್ತೀವಿ- ಸಿ.ಟಿ.ರವಿ

ಚಿತ್ರದುರ್ಗ: ಯಾರ ಹಣೆ ಬರಹವನ್ನು ಯಾರೂ ನಿರ್ಧರಿಸಿರುವುದಿಲ್ಲ. ಎಲ್ಲಾ ಭಗವಂತನೇ ನಿರ್ಧರಿಸಿ ಭೂಮಿಗೆ ಕಳಿಸಿರುತ್ತಾನೆ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆ ಎನ್ನುವುದು ಮುಖ್ಯವಲ್ಲ, ಅಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡಬೇಕು ಎಂದು ಸರ್ಕಾರದ ಅಸ್ಥಿತ್ವದ ಕುರಿತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕೊಟ್ಟಿರುವುದು ನ್ಯಾಯಾಲಯ. ಕಾನೂನು, ನ್ಯಾಯಾಲಯಕ್ಕಿಂತ ಯಾರೂ ಹಿರಿಯರಲ್ಲ. ಕೆಲವರು ಕಾನೂನಿಗಿಂತ ದೊಡ್ಡವರು ಅಂದುಕೊಳ್ಳುತ್ತಾರೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ಡಿಕೆಶಿ ವಿಚಾರದಲ್ಲಿ ಯಾರೇ ಅವರ ಬೆನ್ನಿಗೆ ನಿಂತರೂ ನ್ಯಾಯಾಲಯವೇ ತೀರ್ಪು ಕೊಡಲಿದೆ. ಇದರಲ್ಲಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಕೋರ್ಟ್ ತೀರ್ಪಿಗೆ ಎಲ್ಲರೂ ತೆಲೆ ಬಾಗಲೇಬೇಕು ಎಂದರು.

ರಾಮ ಮಂದಿರವನ್ನು ಕಟ್ಟುವುದು ನಮ್ಮ ಆದ್ಯತೆಯ ವಿಷಯ. ನಾವು ಪ್ರತಿಪಾದಿಸಿದ ವಿಚಾರವನ್ನು ಎಂದೂ ಕೈ ಬಿಟ್ಟಿಲ್ಲ. ಅಕ್ರಮಣಕಾರಿ ಅಕ್ಬರ್ ನನ್ನು ವೈಭವೀಕರಿಸುವದನ್ನು ದೇಶ ಭಕ್ತರು ಸಹಿಸಲ್ಲ. ನ್ಯಾಯಾಲಯ ಇದೀಗ ವಿಚಾರಣೆ ನಡೆಸುತ್ತಿದೆ. ರಾಮಮಂದಿರ ವಿವಾದವನ್ನು ಪರಿಹರಿಸುವ ರೀತಿಯ ತೀರ್ಪು ಸುಪ್ರೀಂ ಕೋರ್ಟ್‍ನಿಂದ ಹೊರಬೀಳಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಬ್ಯಾಂಕಿಂಗ್ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಯಲ್ಲಿ ಕೊಡಬೇಕು ಎಂದು ಆಗ್ರಹಿಸಿದ್ದೆವು. ಈ ಕುರಿತು ನಿರ್ಮಲಾ ಸೀತಾರಮನ್ ಜೊತೆಗೂ ಚರ್ಚಿಸಿದ್ದೆವು. ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿ ತಿದ್ದುಪಡಿಗೆ ಒತ್ತಾಯಿಸುತ್ತೇವೆ. ಈ ರೀತಿಯಾಗುತ್ತಿರುವುದು ಇದೇ ಮೊದಲ ಬಾರಿಯಲ್ಲ ಈ ಹಿಂದೆಯೂ ಇದೇ ರೀತಿಯಾಗಿತ್ತು. ಆಗಿನಿಂದಲೂ ಒತ್ತಾಯಿಸುತ್ತ ಬಂದಿದ್ದೇವೆ. ಈಗಲೂ ಸಹ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *