ಉಡುಪಿಯಲ್ಲಿ ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಜನ

ಉಡುಪಿ: ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ಕಾಯ್ದೆಯ ದಂಡ ವಸೂಲಿ ವಿರುದ್ಧ ಸಾರ್ವಜನಿಕರು ಅಲ್ಲಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಈಗ ಉಡುಪಿಯಲ್ಲೂ ಈ ರೀತಿಯ ಘಟನೆ ನಡೆದಿದೆ.

ನಗರದ ಪಿಪಿಸಿ ಕಾಲೇಜು ಸಮೀಪ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ನಿಂತಿದ್ದರು. ಸಮೀಪದಲ್ಲಿ ಉಡುಪಿ ನಗರದ ಪಿಪಿಸಿ ಕಾಲೇಜ್ ಬಳಿ ಸಮವಸ್ತ್ರ ಧರಿಸದ, ಮಫ್ತಿಯಲ್ಲಿ ಇರುವ ಪೊಲೀಸರು ದ್ವಿಚಕ್ರ ವಾಹನಗಳನ್ನು ತಡೆದು ದಂಡ ವಸೂಲಿಗೆ ಇಳಿದಿದ್ದರು.

ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮವಸ್ತ್ರ ಇಲ್ಲದ ಈ ಪೊಲೀಸರು ಕರ್ತವ್ಯ ಪಾಲನೆಯಲ್ಲಿ ಇದ್ದದ್ದು ಸಂಶಯ ಮೂಡಿಸುವಂತಿತ್ತು. ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಮತ್ತು ವಿದ್ಯಾರ್ಥಿಗಳು, ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಅಲ್ಲಿಯೇ ಸ್ವಲ್ಪ ದೂರದಲ್ಲಿ ಇಲಾಖಾ ಜೀಪಿನಲ್ಲಿದ್ದ ಟ್ರಾಫಿಕ್ ಎಸ್‍ಐ ಅವರನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲಾಖಾ ವಾಹನದಲ್ಲಿದ್ದ ಟ್ರಾಫಿಕ್ ಎಸ್‍ಐ ದೂರದಲ್ಲಿ ವಾಹನದೊಳಗೆ ಕುಳಿತ್ತಿದ್ದರು. ಸಮವಸ್ತ್ರ ಧರಿಸದ ಪೊಲೀಸ್ ಸಿಬ್ಬಂದಿಯನ್ನು ವಾಹನ ತಡೆದು ನಿಲ್ಲಿಸಲು ಇಳಿಸಲಾಗಿತ್ತು. ಇದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದು ಈ ರಾದ್ಧಾಂತಕ್ಕೆ ಕಾರಣವಾಯಿತು. ಜನರಲ್ಲಿ ಸರ್ಕಾರದ ದಂಡದ ಕುರಿತು ಇದ್ದ ಆಕ್ರೋಶ ಈಗ ಪೊಲೀಸರ ಮೇಲೆ ಶಿಫ್ಟಾಗಿದೆ.

Comments

Leave a Reply

Your email address will not be published. Required fields are marked *