ಮನೆಯಲ್ಲಿದ್ದ 10 ಲಕ್ಷ ರೂ. ಕದ್ದ ಯುವತಿ ಪ್ರಿಯಕರನೊಂದಿಗೆ ಸಿಕ್ಕಿಬಿದ್ಲು

ಮುಂಬೈ: ಯುವತಿ ತನ್ನ ಗೆಳೆಯನಿಗಾಗಿ ಸ್ವಂತ ಮನೆಯಲ್ಲಿದ್ದ 10 ಲಕ್ಷ ರೂ. ಕದ್ದು ಪರಾರಿಯಾಗಿ, ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಕಂಡಿವಲಿ ನಿವಾಸಿ ರಾಧಾ ಗುಪ್ತಾ (19) ಬಂಧಿತ ಯುವತಿ. ರಾಧಾಳ ಗೆಳೆಯ ಅಮೀರ್ ನೌಷಾದ್ ಖಾನ್ ಗೋವಂಡಿಯ ನಿವಾಸಿ. ಈ ಇಬ್ಬರನ್ನು ಪೊಲೀಸರು ಭಾನುವಾರ ಕಲಿನಾ ಪ್ರದೇಶದಲ್ಲಿ ಬಂಧಿಸಿದ್ದಾರೆ.

ರಾಧಾ ಗುಪ್ತಾ ಮನೆಯಿಂದ 10 ಲಕ್ಷ ರೂ.ವನ್ನು ಆಗಸ್ಟ್ 30ರಂದು ಕದ್ದು, ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ಈ ಸಂಬಂಧ ರಾಧಾಳ ಪೋಷಕರು ಕಂಡಿವಾಲಿ ಠಾಣೆಗೆ ದೂರು ನೀಡಿದ್ದರು. ಕಳ್ಳತನದ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದರು.

ಪೊಲೀಸರು ರಾಧಾಳ ಪತ್ತೆಗಾಗಿ ಪೋಷಕರಿಂದ ಆಕೆಯ ಮೊಬೈಲ್ ನಂಬರ್ ಪಡೆದಿದ್ದರು. ಬಳಿಕ ಮೊಬೈಲ್ ನಂಬರ್ ಟ್ರೇಸ್ ಮಾಡಿದಾಗ ರಾಧಾ ಮುಂಬೈನ ಕಲಿನಾ ಪ್ರದೇಶದ ಮನೆಯೊಂದರಲ್ಲಿ ಇರುವುದನ್ನು ತಿಳಿದು ಬಂದಿತ್ತು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಜೊತೆಗೆ ರಾಧಾಳ ಬಳಿ ಇದ್ದ 7 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡ ರಾಧಾ, ಉತ್ತರ ಪ್ರದೇಶದ ಅಜಂಘಡದಲ್ಲಿ ನಡೆದ ಮದುವೆಯಲ್ಲಿ ನೌಷಾದ್ ಪರಿಚಯವಾಗಿದ್ದ. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ನೌಷಾದ್ ವ್ಯಾಪಾರ ಆರಂಭಿಸುವುದಕ್ಕೆ ಸಹಾಯ ಮಾಡಲು ಹಣ ಕದ್ದಿದ್ದೇನೆ ಎಂದು ತಿಳಿಸಿದ್ದಾಳೆ.

ಪೊಲೀಸರು ಆರೋಪಿಗಳನ್ನು ಸೋಮವಾರ ಸ್ಥಳೀಯ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಇಬ್ಬರನ್ನು ಒಂದು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

Comments

Leave a Reply

Your email address will not be published. Required fields are marked *