ಈಗ ಕೊಟ್ಟಿದ್ದೇ ಹೆಚ್ಚಾಯ್ತು- ಪ್ರವಾಹ ಸಂತ್ರಸ್ತರ ಮೇಲೆ ಈಶ್ವರಪ್ಪ ದರ್ಪ

– ಕಾಂಗ್ರೆಸ್ ಬೆಂಬಲಿತ ಜನರಿಂದ ಪ್ರತಿಭಟನೆ
– ಉದ್ದೇಶಪೂರ್ವಕವಾಗಿ ನನ್ನನ್ನು ತಡೆಯಲಾಯಿತು

ಚಿಕ್ಕೋಡಿ: ಪರಿಹಾರ ಕೇಳಲು ಬಂದ ಪ್ರವಾಹ ಸಂತ್ರಸ್ತರಿಗೆ ಈಗ ಕೊಟ್ಟಿದ್ದೆ ಹೆಚ್ಚಾಯ್ತು ಎಂದು ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ದರ್ಪ ತೋರಿದ್ದಾರೆ.

ಇಂದು ಚಿಕ್ಕೋಡಿಯ ಯಡುರು ಗ್ರಾಮಕ್ಕೆ ಪ್ರವಾಹ ಗ್ರಾಮಗಳ ವೀಕ್ಷಣೆಗೆ ಬಂದಿದ್ದ ಈಶ್ವರಪ್ಪ ಅವರನ್ನು ಸಂತ್ರಸ್ತರು ಈಗ ನೀಡುತ್ತಿರುವ 10 ಸಹಾಯಧನ ಸಾಕಾಗುತ್ತಿಲ್ಲ. ಮನೆಯನ್ನು ಕಳೆದುಕೊಂಡಿದ್ದೇವೆ. ಈ ಹಣ ತೆಗೆದುಕೊಂಡು ನಮಗೆ ಜೀವನ ನಡೆಸುವುದು ನಮಗೆ ಕಷ್ಟವಾಗುತ್ತಿದೆ ಎಂದು ಕೇಳಿಕೊಂಡಿದ್ದಾರೆ.

ಸಂತ್ರಸ್ತರ ಸಮಸ್ಯೆಗಳನ್ನು ಕಾರಿನಲ್ಲೇ ಕುಳಿತು ಸ್ವೀಕಾರ ಮಾಡುತ್ತಿದ್ದ ಈಶ್ವರಪ್ಪ. ನಾವು ಈಗ ಕೊಡುತ್ತಿರುವ ಪರಿಹಾರ ಧನವೇ ನಿಮಗೆ ಹೆಚ್ಚಾಗಿದೆ. ಇನ್ನೂ ಜಾಸ್ತಿ ನೀಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಆಕ್ರೋಶಗೊಂಡ ಸಂತ್ರಸ್ತರು ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈಶ್ವರಪ್ಪ ಅವರ ವಿರುದ್ಧ ಘೋಷಣೆ ಕೂಗಿ ಕಾರನ್ನು ತಡೆದು ಪ್ರತಿಭಟನೆ ಮಾಡಿದ್ದಾರೆ.

ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಈಶ್ವರಪ್ಪ, ನಾನು ಎಲ್ಲಾ ಗ್ರಾಮಗಳಿಗೂ ಅಧಿಕಾರಿಗಳ ಜೊತೆ ಹೋಗಿ ಪ್ರವಾಹ ವೀಕ್ಷಣೆ ಮಾಡಿ ಎಲ್ಲರಿಗೂ ಪರಿಹಾರ ಹಣ ದೊರೆಯುವಂತೆ ಮಾಡುತ್ತಿದ್ದೇನೆ. ಗ್ರಾಮದ ದೇವಸ್ಥಾನದಲ್ಲಿ ಸಂತ್ರಸ್ತರ ಜೊತೆ ಸಭೆ ನಡೆಸಿ ಪರಿಹಾರ ನೀಡುವ ಬಗ್ಗೆ ಭರವಸೆ ಕೊಟ್ಟಿದ್ದೇನೆ. ಸಭೆ ಮುಗಿಸಿ ಬರುತ್ತಿದ್ದಾಗ ಕಾಂಗ್ರೆಸ್ ಬೆಂಬಲಿತ ಜನ ಪ್ರತಿಭಟನೆ ಮಾಡಿದ್ದಾರೆ. ಇದು ರಾಜಕೀಯಕ್ಕಾಗಿ ಮಾಡಿದ ಪ್ರತಿಭಟನೆ ಎಂದು ಪ್ರತಿಕ್ರಿಯಿಸಿದರು.

ಈ ಘಟನೆಗೂ ಮುಂಚೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಈಶ್ವರಪ್ಪ, ಈಗಾಗಲೇ ಪ್ರವಾಹ ಪೀಡಿತ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ. ಬರುವ ದಿನಗಳಲ್ಲಿ ಬಿದ್ದ ಮನೆಗೆ ಪರಿಹಾರ, ಮನೆ ಕಟ್ಟಿ ಕೊಡಲು ಪರಿಹಾರ ನೀಡಲಾಗುವುದು ಎಂದು ಹೇಳಿದರು. ಇದೇ ವೇಳೆ ರಾಜಕೀಯ ನಾಯಕರು ಬಂದ ಪುಟ್ಟ ಹೋದ ಪುಟ್ಟ ಅನ್ನೋ ಹಾಗೇ ಮಾಡುತ್ತಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೆಂಡಾ ಮಂಡಲವಾದ ಈಶ್ವರಪ್ಪ ಮೈಕ್ ತಳ್ಳಿ ಮುಂದೆ ಹೋದರು.

Comments

Leave a Reply

Your email address will not be published. Required fields are marked *