ಡಿಕೆಶಿ ನಮ್ಮ ಸಮಾಜದವನು, ಕಾಂಗ್ರೆಸ್ಸಿನಲ್ಲಿ ಬೆಳೆಯುತ್ತಾನೆಂದು ಇಡಿಯಿಂದ ಅರೆಸ್ಟ್ – ರೇವಣ್ಣ

ಹಾಸನ: ಡಿ.ಕೆ.ಶಿವಕುಮಾರ್ ನಮ್ಮ ಸಮಾಜದವನು. ಕಾಂಗ್ರೆಸ್‍ ನಲ್ಲಿ ಬೆಳೆಯುತ್ತಾನೆ ಎಂಬ ಉದ್ದೇಶದಿಂದ ಇಡಿಯಿಂದ ಅರೆಸ್ಟ್ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಎಚ್.ಡಿ.ರೇವಣ್ಣ ಹರಿಹಾಯ್ದಿದ್ದಾರೆ.

ಬೇಲೂರಿನಲ್ಲಿ ಜೆಡಿಎಸ್ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಗೆ  ಏನು ಮಾಡುತ್ತಿದ್ದಾರೆ. ಅದನ್ನು ನಾನು ಖಂಡಿಸುತ್ತೇನೆ. ಬೇಕಂತಲೇ ಈ ರೀತಿ ಮಾಡುತ್ತಿದ್ದಾರೆ. ಡಿಕೆಶಿ ತಂದೆಗೆ ಎಡೆ ಇಡುತ್ತೇನೆ ಎಂದರೂ ಕರುಣೆ ತೋರಿಸಲಿಲ್ಲ. ನಾನು ಇದನ್ನೆಲ್ಲ ನೋಡುತ್ತಿದ್ದೇನೆ. ಯಡಿಯೂರಪ್ಪ ಅವರ ಮಗ ಡಿಕೆಶಿ ಮನೆಗೆ ಹೋಗಿ ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡಿಸಿಕೊಂಡಿದ್ದರೂ ದ್ವೇಷದ ರಾಜಕಾರಣ ಬಿಡಲಿಲ್ಲ ಎಂದು ಬಿಎಸ್‍ವೈ ವಿರುದ್ಧ ಕಿಡಿಕಾರಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಅಧಿಕಾರ ವಹಿಸಿಕೊಂಡ ನಂತರ ಸಂಜೆಯೇ ಕೆಎಂಎಫ್ ಫೈಲ್ ತೆಗೆದರು. ಬಿ.ಎಸ್.ಯಡಿಯೂರಪ್ಪನವರಿಗೆ ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕರಿಗೆ ನೈತಿಕತೆ ಇದ್ದರೆ, ಸಿಎಂ ಯಡಿಯೂರಪ್ಪ ಅವರನ್ನು ಕೇಳಲಿ, ಮುಖ್ಯಮಂತ್ರಿಯಾಗಿ ಎಂಟು ದಿನಕ್ಕೆ ಶಿವಮೊಗಕ್ಕೆ ಎರಡು ಸಾವಿರ ಕೋಟಿ ರೂ. ಹಣ ತೆಗೆದಿದ್ದಾರೆ. ಕುಮಾರಸ್ವಾಮಿಗೆ ಹಾಸನ ಬಜೆಟ್ ಅಂತಿದ್ರಲ್ಲಾ? ಇದು ಶಿಕಾರಿಪುರ ಬಜೆಟ್ಟಾ? ಜಗದೀಶ್ ಶೆಟ್ಟರ್ ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು. ಈಗ ಸಿಎಂ ಯಡಿಯೂರಪ್ಪನವರನ್ನು ಕೇಳೋಕೆ ಭಯವೇ? ಸಿಕ್ಕ ಮಂತ್ರಿ ಪದವಿ ಹೋಗುತ್ತೆ ಅಂತ ಜಗದೀಶ್ ಶೆಟ್ಟರ್ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್ ಅಂದರೆ ನಾಯಕರನ್ನು ತಯಾರಿಸುವ ಕಾರ್ಖಾನೆ. ಬೆಳೆದ ಮೇಲೆ ಮೇವು ಎಲ್ಲಿ ಸಿಗುತ್ತೋ ಅಲ್ಲಿಗೆ ಹೋಗುತ್ತವೆ. ನಮ್ಮ ಕೆಲಸ ಯಾರೂ ತಡೆಯೋಕೆ ಆಗಲ್ಲ, ಬೇಕಿದ್ದರೆ ನಿಧಾನ ಮಾಡಬಹುದು. ನಮ್ಮ ಕೆಲಸಗಳನ್ನು ನಾನು ಮಾಡಿಯೇ ತೀರುತ್ತೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *