ಗುರುವಾರವೂ ರಾಮನಗರ ಬಂದ್, ಶಾಲಾ ಕಾಲೇಜಿಗೆ ರಜೆ

ರಾಮನಗರ: ದೆಹಲಿಯ ಫ್ಲ್ಯಾಟ್‍ನಲ್ಲಿ ಪತ್ತೆಯಾದ 8.59 ಕೋಟಿ ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ನಿನ್ನೆ ರಾತ್ರಿ ಅರೆಸ್ಟ್ ಆಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ರನ್ನು ಸೆಪ್ಟೆಂಬರ್ 13ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿ ದೆಹಲಿ ಕೋರ್ಟ್ ಆದೇಶ ನೀಡಿದೆ. ಕೋರ್ಟ್ ಆದೇಶ ಪ್ರಕಟವಾಗುತ್ತಿದಂತೆ ರಾಮನಗರದಲ್ಲಿ ಆಕ್ರೋಶ ಭುಗಿಲೆದಿದ್ದು, ನಾಳೆ ರಾಮನಗರ ಬಂದ್‍ಗೆ ಕರೆ ನೀಡಲಾಗಿದೆ.

ರಾಮನಗರದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿರುವ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ  ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಾಳೆಯೂ ರಸ್ತೆ ತಡೆ ನಡೆಯಸುವ ಸಾಧ್ಯತೆ ಇರುವುದರಿಂದ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಎಸ್‍ಪಿ ಹಾಗೂ ಹೆಚ್ಚುವರಿ ಎಸ್‍ಪಿ, ಡಿವೈಎಸ್‍ಪಿ, 2 ಸಿಆರ್ ಪಿಎಫ್ ತುಕಡಿ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಇಂದು ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರಿಗೆ ಸಂಜೆ ವೇಳೆಗೆ ಪ್ರತಿಭಟನೆ ಸ್ಥಗಿತಗೊಳಿಸಿ ತೆರಳುವಂತೆ ಎಸ್‍ಪಿ ಸೂಚನೆ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಡಿಕೆ ಶಿವಕುಮಾರ್ ಅವರ ಬೆಂಬಲಿಗರು ನಾಳೆ 1 ಲಕ್ಷ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೇ ವಿಧಾನಸೌಧ ಮುತ್ತಿಗೆ ಹಾಕಲು ಕೂಡ ತೀರ್ಮಾನ ತೆಗೆದುಕೊಂಡಿದ್ದಾರೆ. 9 ದಿನಗಳ ಕಾಲ ಡಿಕೆಶಿ ಅವರು ಜಾರಿ ನಿರ್ದೇಶನಾಲಯದ ವಶದಲ್ಲಿ ಇರುವುದರಿಂದ 9 ದಿನಗಳು ನಿರಂತರವಾಗಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ. ರಾಮನಗರ ಜಿಲ್ಲಾಧಿಕಾರಿಗಳು ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *