ಅಂತರಾಷ್ಟ್ರೀಯ ಟಿ-20ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

ಮುಂಬೈ: ಟೀಂ ಇಂಡಿಯಾ ಮಹಿಳಾ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅಂತರಾಷ್ಟ್ರೀಯ ಟಿ-20ಗೆ ನಿವೃತ್ತಿ ಘೋಷಿಸಿದ್ದಾರೆ.

ನಿವೃತ್ತಿಯ ಬಳಿಕ ಪ್ರತಿಕ್ರಿಯೆ ನೀಡಿರುವ ಮಿಥಾಲಿ ರಾಜ್, ದೇಶಕ್ಕಾಗಿ ವಿಶ್ವಕಪ್ ಗೆಲ್ಲುವುದು ನನ್ನ ಕನಸಾಗಿ ಉಳಿದಿದೆ. ಅದನ್ನು ನೆರವೇರಿಸಲು ಹೆಚ್ಚಿನ ಪ್ರಯತ್ನ ಪಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ, ಕೊಹ್ಲಿ ಹಿಂದಿಕ್ಕಿದ ಮಿಥಾಲಿ ರಾಜ್

ಬಿಸಿಸಿಐ ನಿರಂತರ ಬೆಂಬಲಕ್ಕಾಗಿ ನಾನು ಧನ್ಯವಾದ ತಿಳಿಸುತ್ತೇನೆ. ದಕ್ಷಿಣ ಆಫ್ರಿಕಾ ಮಹಿಳೆಯರ ವಿರುದ್ಧದ ತವರಿನಲ್ಲಿ ನಡೆಯಲಿರುವ ಸರಣಿಗೆ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಸೆಪ್ಟೆಂಬರ್ 24ರಂದು ಟೀಂ ಇಂಡಿಯಾ ಟ್ವೆಂಟಿ-20 ಸರಣಿ ಆಡಲಿದೆ. ಆದರೆ ಕಿರಿಯರಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶದಿಂದ ಬಿಸಿಸಿಐ ಮಿಥಾಲಿ ರಾಜ್ ಅವರನ್ನು ಕೈಬಿಟ್ಟಿದೆ. ಇದನ್ನೂ ಓದಿ: ಮಹಿಳಾ ಕ್ರಿಕೆಟ್‍ನಲ್ಲಿ ಮಿಥಾಲಿ ರಾಜ್ ವಿಶ್ವದಾಖಲೆ

ಐಸಿಸಿ ವಿಶ್ವಕಪ್ ಟಿ20 ಸಂದರ್ಭದಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮಿಥಾಲಿರಾಜ್ ರನ್ನು ಆಡುವ 11ರ ಕೈ ಬಿಡಲಾಗಿತ್ತು. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್, ಮಿಥಾಲಿರಾಜ್‍ರನ್ನು ಆಡುವ 11ರ ಬಳಗದಿಂದ ಕೈಬಿಟ್ಟಿದಕ್ಕೆ ಯಾವುದೇ ವಿಷಾದವಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

ತಂಡದ ದೃಷ್ಟಿಯಿಂದ ಕೆಲ ಬದಲಾವಣೆಗಳನ್ನು ಮಾಡಲಾಗುತ್ತದೆ. ಆದರೆ ಕೆಲವು ಬಾರಿ ಅದರಲ್ಲಿ ಯಶಸ್ವಿಯಾದರೆ, ಮತ್ತೆ ಕೆಲವು ಬಾರಿ ಸೋಲುತ್ತೇವೆ. ಈ ಪಂದ್ಯ ನಮ್ಮ ಯುವ ಪಡೆಗೆ ಒಂದು ಪಾಠವಾಗಿದ್ದು, ಟೂರ್ನಿಯಲ್ಲಿ ತಂಡ ತೋರಿದ ಪ್ರದರ್ಶನಕ್ಕೆ ಹೆಮ್ಮೆ ಇದೆ ಎಂದು ತಿಳಿಸಿದ್ದರು.

ಭಾರತೀಯ ಮಹಿಳಾ ತಂಡವು 2006ರಲ್ಲಿ ಟ್ವೆಂಟಿ-20 ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಕಾಲಿಟ್ಟಾಗ ಮಿಥಾಲಿ ರಾಜ್ ನಾಯಕಿಯಾಗಿದ್ದರು. ಈ ಮೂಲಕ 36 ವರ್ಷದ ಮಿಥಾಲಿ ರಾಜ್ 2006ರಿಂದ ಟೀಂ ಇಂಡಿಯಾ ಮಹಿಳಾ ಟ್ವೆಂಟಿ-20 ತಂಡವನ್ನು ಮುನ್ನಡೆಸಿದ್ದರು. 2012ರ ಶ್ರೀಲಂಕಾ, 2014ರ ಬಾಂಗ್ಲಾದೇಶ, 2016ರಲ್ಲಿ ಭಾರತದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದರು.

ವಿಶ್ವ ಟಿ20ಯಲ್ಲಿ 2 ಸಾವಿರ ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದಿರುವ ಮಿಥಾಲಿ ರಾಜ್ 88 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 2,364 ರನ್ ಹೊಡೆದಿದ್ದಾರೆ.

Comments

Leave a Reply

Your email address will not be published. Required fields are marked *