ಕೈಗಾರಿಕೆಗಳು ಬೆಂಗಳೂರು ಕೇಂದ್ರಿತವಾಗದಂತೆ ಹೊಸ ಕೈಗಾರಿಕಾ ನೀತಿ ಜಾರಿ – ಜಗದೀಶ್ ಶೆಟ್ಟರ್

ಬೆಂಗಳೂರು: ಕೈಗಾರಿಕೆಗಳೆಂದರೆ ಬೆಂಗಳೂರು ಕೇಂದ್ರಿತ ಎನ್ನುವಂತಾಗಿದೆ. ಹೀಗಾಗಿ ಹೊಸ ಕೈಗಾರಿಕಾ ನೀತಿ ಜಾರಿಗೆ ಮುಂದಾಗಿದ್ದೇವೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕಾ ಅಭಿವೃದ್ಧಿ ಟೈರ್ ನಗರಗಳಿಗೂ ವಿಸ್ತರಣೆ ಆಗಬೇಕಿದೆ. ಅಂದರೆ ರಾಜ್ಯದ ಇತರ ನಗರಗಳಿಗೂ ಕೈಗಾರಿಕೆಗಳನ್ನು ವಿಸ್ತರಿಸುವ ಮೂಲಕ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ, ಹಾಗೂ ಅಭಿವೃದ್ಧಿಯಾಗಬೇಕಿದೆ. ಈ ನಿಟ್ಟಿನಲ್ಲಿ ಬೇರೆ ರಾಜ್ಯಗಳ ಕೈಗಾರಿಕಾ ನೀತಿಗಳನ್ನೂ ಅಧ್ಯಯನ ಮಾಡಲಾಗುತ್ತಿದೆ. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೈಗಾರಿಕಾ ನೀತಿ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.

ಹಿಂದಿನ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನಕ್ಕೆ ತೀರ್ಮಾನಿಸಿತ್ತು. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಂಡವಾಳ ಹೂಡಿಕೆದಾರರ ಸಮ್ಮೇಳನ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಮುಂದಿನ ಜನವರಿಗೆ ಬಂಡವಾಳ ಹೂಡಿಕೆದಾರ ಸಮ್ಮೇಳನ ನಡೆಸುವ ಪ್ರಸ್ತಾಪ ಇದೆ ಎಂದು ಸ್ಪಷ್ಟಪಡಿಸಿದರು.

ಆರ್ಥಿಕ ಹಿಂಜರಿತ ಸದ್ಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿದೆ, ರಾಜ್ಯದ ಮಟ್ಟಿಗೆ ಆರ್ಥಿಕ ಹಿಂಜರಿತದ ಬಿಸಿ ತಟ್ಟಿಲ್ಲ. ಇದು ತಾತ್ಕಾಲಿಕ ಆರ್ಥಿಕ ಹಿಂಜರಿತ ಮಾತ್ರ, ಇದು ಸಧ್ಯದಲ್ಲೇ ಅಂತ್ಯವಾಗುವ ನಿರೀಕ್ಷೆ ಇದೆ. ನಾನು ಸಹ ಇಲಾಖವಾರು ಪರಿಣಾಮಗಳ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ ಎಂದು ಮಾಹಿತಿ ನೀಡಿದರು.

ಜಿಂದಾಲ್‍ಗೆ ಕೊಟ್ಟ ಭೂಮಿಯನ್ನು ವಾಪಸ್ ಪಡೆಯುವ ಬಗ್ಗೆ ನಿರ್ಧಾರ ವಿಳಂಬವಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಹಿಂದಿನ ಸರ್ಕಾರ ಸಂಪುಟ ಉಪಸಮಿತಿ ರಚಿಸಿತ್ತು. ಅದರ ವರದಿಯನ್ನು ಪರಿಶೀಲಿಸಬೇಕು. ಪರಿಸ್ಥಿತಿ ಏನಿದೆ ಎಂದು ಸಮಗ್ರವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಸರ್ಕಾರ ರಚನೆಯಾಗಿ ಒಂದು ತಿಂಗಳಾಗಿದೆಯಷ್ಟೇ, ನಾನು ಇಲಾಖೆ ವಹಿಸಿಕೊಂಡು ಒಂದು ವಾರ ಆಗಿದೆ. ಜಿಂದಾಲ್ ವಿಚಾರದಲ್ಲಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಇದರಲ್ಲಿ ಯಾವುದೇ ವಿಳಂಬ ಆಗಿಲ್ಲ ಎಂದು ಸಮರ್ಥಿಸಿಕೊಂಡರು.

ಡಿ.ಕೆ.ಶಿವಕುಮಾರ್ ಕಣ್ಣೀರು ಹಾಕಿದ ಕುರಿತು ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ನಡೆಯುತ್ತಿದೆ. ಹಾಗಾಗಿ ಅವರಿಗೆ ಹಾಗನ್ನಿಸುತ್ತಿರಬಹುದು. ಅವರ ಭಾವನೆಗೆ ನಾವು ಏನೂ ಮಾಡಲೂ ಸಾಧ್ಯವಿಲ್ಲ. ಇಡಿ, ಸಿಬಿಐ, ಐಟಿ ಸ್ವಾಯತ್ತ ಸಂಸ್ಥೆಗಳಾಗಿದ್ದು, ಕೇಂದ್ರದಿಂದ ಈ ಸಂಸ್ಥೆಗಳ ದುರುಪಯೋಗ ಆಗಿಲ್ಲ. ಇಡಿ, ಸಿಬಿಐ ಪ್ರಕರಣ ಇಂದು, ನಿನ್ನೆಯದಲ್ಲ ಮೊದಲಿನಿಂದಲೂ ಡಿಕೆಶಿ ವಿರುದ್ಧ ಪ್ರಕರಣ ನಡೆಯುತ್ತಿದೆ. ಹೀಗಿರುವಾಗ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರ ಮಧ್ಯಂತರ ಚುನಾವಣೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ಯಾವಾಗ ಭವಿಷ್ಯಗಾರರು ಆಗಿದ್ದಾರೋ ಗೊತ್ತಿಲ್ಲ. ಸರ್ಕಾರ ಹೋದ ಮೇಲೆ ಸಿದ್ದರಾಮಯ್ಯ ಖಾಲಿ ಆಗಿದ್ದಾರೆ. ಹೀಗಾಗಿ ಮಧ್ಯಂತರ ಚುನಾವಣೆ ನಿರೀಕ್ಷೆಯಲ್ಲಿದ್ದಾರೆ. ಅಧಿಕಾರ ಕಳೆದುಕೊಂಡ ಮೇಲೆ ಸಿದ್ದರಾಮಯ್ಯನವರಿಗೆ ಕೆಲಸ ಇಲ್ಲ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಮಧ್ಯಂತರ ಚುನಾವಣೆ ಬರಲ್ಲ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *