ನನ್ನಿಂದ ನೋವಾಗಿದ್ದರೆ ಕ್ಷಮಿಸಿ- ಡಿಕೆಶಿ ಕಣ್ಣೀರಿಗೆ ಮರುಗಿದ ಶ್ರೀರಾಮುಲು

ಚಿತ್ರದುರ್ಗ: ಇಡಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಕಣ್ಣೀರಿಟ್ಟ ವಿಚಾರಕ್ಕೆ ಆರೋಗ್ಯ ಮಂತ್ರಿ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿ,  ಅವರ ಕಣ್ಣೀರಿಗೆ ಮರುಗಿದ್ದಾರೆ. ನನ್ನಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಡಿ.ಕೆ ಶಿವಕುಮಾರ್ ಅವರ ವೈಯಕ್ತಿಕ ವಿಚಾರಕ್ಕೆ ಎಂದಿಗೂ ಹೇಳಿಕೆ ಕೊಟ್ಟಿಲ್ಲ. ಅವರು ಹೇಗೆ ನನಗೆ ರಾಜಕೀಯವಾಗಿ ಕೆಣಕಿ, ಟೀಕೆ ಮಾಡುತ್ತಿದ್ದರೋ, ಅದರಂತೆ ನಾನೂ ಕೂಡ ರಾಜಕೀಯ ವಿಚಾರಕ್ಕೆ ಮಾತ್ರ ಅವರ ವಿರುದ್ಧ ಮಾತನಾಡಿದ್ದೇನೆ. ಒಬ್ಬ ಮನುಷ್ಯ ಕಷ್ಟದಲ್ಲಿರುವಾಗ ಅವರನ್ನು ಟೀಕಿಸುವವನು ನಾನಲ್ಲ. ನಾನು ಕೆಟ್ಟ ಮನಸ್ಸಿನಿಂದ ಯಾವ ಮಾತು ಆಡಿಲ್ಲ. ನನ್ನ ಮಾತಿನಿಂದ ನೋವಾಗಿದ್ದರೆ, ಡಿಕೆಶಿ ಅವರೇ ನನ್ನನ್ನು ಕ್ಷಮಿಸಿ ಎಂದು ಹೇಳಿದರು.

ನನ್ನ ಮಾತು ಕೇವಲ ರಾಜಕಾರಣಕ್ಕೆ ಸೀಮಿತವಾಗಿತ್ತು, ವೈಯಕ್ತಿಕವಾಗಿ ನಾನು ಮಾತನಾಡಿಲ್ಲ. ಕಾನೂನು ಏನು ಕೆಲಸ ಮಾಡಬೇಕೋ ಅದು ಮಾಡುತ್ತೆ. ಅವರು ಕಷ್ಟದಲ್ಲಿರುವಾಗ ಕಣ್ಣೀರು ಹಾಕುವ ವೇಳೆ ಚುಚ್ಚು ಮಾತನಾಡಿದರೆ ನೋವಾಗುತ್ತೆ. ಇದರಿಂದ ಅವರ ಕುಟುಂಬಕ್ಕೂ ನೋವಾಗುತ್ತೆ. ಕಷ್ಟದಲ್ಲಿರುವವರಿಗೆ ನಾನು ಯಾವತ್ತೂ ಟೀಕೆ ಮಾಡಲ್ಲ, ಬೇರೆಯವರು ಕೂಡ ಕಷ್ಟದಲ್ಲಿರುವವರನ್ನು ನೋಡಿ ಟೀಕಿಸಬಾರದು. ಅದು ತಪ್ಪು. ನನ್ನ ಮಾತನ್ನು ಡಿಕೆಶಿ ಅವರು ರಾಜಕೀಯವಾಗಿ ಮಾತ್ರ ತೆಗೆದುಕೊಳ್ಳಬೇಕು, ವೈಯಕ್ತಿಕವಾಗಿ ನೋಡಬಾರದು ಎಂದು ಮರುಗಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯಂತರ ಚುನಾವಣೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರನ್ನ ತೆಗೆದು ಇಟ್ಟಿದ್ದಾರೆ, ಮೂಲೆ ಗುಂಪು ಮಾಡಿದ್ದಾರೆ, ಮತ್ತೆ ಸಿದ್ದರಾಮಯ್ಯ ಸಿಎಂ ಕನಸು ನನಸಾಗಲ್ಲ ಎಂದು ಟಾಂಗ್ ಕೊಟ್ಟರು.

Comments

Leave a Reply

Your email address will not be published. Required fields are marked *