ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರಕ ಡಿಫ್ತೀರಿಯಾ ಸೋಂಕು ತಗುಲಿರುವ ಶಂಕೆ

ಕಲಬುರಗಿ: ಜಿಲ್ಲೆಯ ಜಿಮ್ಸ್ (ಗುಲಬರ್ಗಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ವೈದ್ಯಕೀಯ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಮಾರಕ ಡಿಫ್ತೀರಿಯಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

ಜಿಮ್ಸ್ ವೈದ್ಯಕೀಯ ಕಾಲೇಜಿನ ಮಹಿಳಾ ವಸತಿ ನಿಲಯದಲ್ಲಿ ವಾಸವಿದ್ದ 21 ವಿದ್ಯಾರ್ಥಿನಿಯರಿಗೆ ಡಿಫ್ತಿರೀಯಾ ಸೋಂಕು ತಗುಲಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಜ್ವರ, ಗಂಟಲು ನೋವಿನಿಂದ ವಿದ್ಯಾರ್ಥಿನಿಯರು ಬಳಲುತ್ತಿದ್ದ ಕಾರಣಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಈ ಬಗ್ಗೆ ತಿಳಿದಿದೆ. ಹೀಗಾಗಿ ಡಿಫ್ತೀರಿಯಾ ಸೋಂಕು ಶಂಕೆ ಹಿನ್ನೆಲೆ ಲೇಡಿಸ್ ಹಾಸ್ಟೆಲಿನಲ್ಲಿದ್ದ 110 ವಿದ್ಯಾರ್ಥಿನಿಯರು ಹಾಗೂ 30 ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಒಟ್ಟು 21 ವಿದ್ಯಾರ್ಥಿನಿಯರಿಗೆ ಡಿಫ್ತೀರಿಯಾ ಸೋಂಕು ತಗುಲಿರುವ ಲಕ್ಷಣಗಳು ಕಂಡುಬಂದಿದ್ದು, ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಡಿಫ್ತೀರಿಯಾ ಸೋಂಕು ಶಂಕೆ ಇರುವ ವಿದ್ಯಾರ್ಥಿಗಳ ವೈದ್ಯಕೀಯ ಪರೀಕ್ಷಾ ವರದಿ ಬೆಂಗಳೂರಿನ ಬಿಎಂಸಿಆರ್‍ಐ ಲ್ಯಾಬೋರೇಟರಿಗೆ ರವಾನೆ ಮಾಡಲಾಗಿದೆ. ಕಲಬುರಗಿಯಲ್ಲಿ ಮಾರಕ ಡಿಫ್ತೀರಿಯಾ ಸೋಂಕು ಶಂಕೆ ಹಿನ್ನೆಲೆ ಜ್ವರ, ಶ್ವಾಸನಾಳ, ಗಂಟಲು ನೋವು ಇದ್ದರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಲ್ಲಿ ಜಿಮ್ಸ್ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *