ಡಿಕೆಶಿ ಪ್ರಕರಣವನ್ನು ರಾಜಕಾರಣಗೊಳಿಸೋದು ಒಳ್ಳೆಯದಲ್ಲ- ಡಿವಿಎಸ್

ಮಂಡ್ಯ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರೇ ಇಡಿ(ಜಾರಿ ನಿರ್ದೇಶನಾಲಯ)ದ ತನಿಖೆಗೆ ಸಿದ್ಧ ಎಂದು ಹೇಳಿದ್ದಾರೆ. ಹೀಗಾಗಿ ಪ್ರಕರಣವನ್ನು ರಾಜಕಾರಣಗೊಳಿಸುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿಕೆ ಶಿವಕುಮಾರ್ ಮೇಲೆ ಇಡಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾನೂನು ಅದರ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ. ಇದು ಇಂದು, ನಿನ್ನೆಯದಲ್ಲ. ಬಹಳ ಹಿಂದಿನದ್ದಾಗಿದೆ. ಅಕ್ರಮ ಹಣ ಇರುವುದರ ಬಗ್ಗೆ ತನಿಖೆಯಾಗುತ್ತಿದೆ ಎಂದರು.

ಇದು ಡಿಕೆಶಿ ಅವರಿಗೆ ಮಾತ್ರವಲ್ಲ. ದೇಶದಲ್ಲಿ ಯಾರು ಆಕ್ರಮ ಎಸಗಿದ್ದಾರೆ ಅವರ ಮೇಲೆ ದಾಳಿ ನಡೆಯುತ್ತಿದೆ. ಡಿಕೆ ಶಿವಕುಮಾರ್ ಕೂಡ ತನಿಖೆಗೆ ಸಿದ್ಧ ಎಂದು ಈಗಾಗಲೇ ಹೇಳಿದ್ದಾರೆ. ಹೀಗಾಗಿ ಇದನ್ನು ರಾಜಕೀಯವಾಗಿ ಎಳೆಯಬಾರದು ಎಂದು ತಿಳಿಸಿದರು.

ಒಂದು ಸರ್ಕಾರ ರಚನೆಯಾಗುವಾಗ ಅಕಾಂಕ್ಷಿಗಳು ತುಂಬಾ ಜನ ಇರುತ್ತಾರೆ. ಪಕ್ಷದ ಹಿರಿಯರು ಅಳೆದು ತೂಗಿ ಕೊಟ್ಟಿದ್ದಾರೆ. ಈ ಬಗ್ಗೆ ಕೆಲವರಿಗೆ ಸ್ವಲ್ಪದಿನ ಮನಸ್ಸಲ್ಲಿ ನೋವಿರುತ್ತದೆ. ಅವರನ್ನು ಈಗಾಗಲೇ ಸಮಾಧಾನ ಮಾಡಿ ಆಗಿದೆ ಎಂದು ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನಗೊಂಡವರ ಬಗ್ಗೆ ಸ್ಪಷ್ಟಪಡಿಸಿದರು.

ಇದೇ ವೇಳೆ ಪುಟ್ಟರಾಜು ಬಿಜೆಪಿ ಮುಖಂಡರ ಜೊತೆ ಕಾಣಿಸಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಪಕ್ಷಕ್ಕೆ ಬರಲು ಮನಸ್ಸಿದ್ದರೆ ಸ್ವಾಗತ ಮಾಡುತ್ತೇವೆ. ಬಂದರೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೇತೃತ್ವದಲ್ಲಿ ಕೊಂಡೊಯ್ಯುತ್ತೇವೆ ಎಂದರು.

Comments

Leave a Reply

Your email address will not be published. Required fields are marked *