ಲಕ್ಷ್ಮಿ ಹೆಬ್ಬಾಳ್ಕರ್ ಸಂಸ್ಕಾರವಿಲ್ಲದ ರಾಜಕಾರಣಿ- ಶ್ರೀರಾಮುಲು

ವಿಜಯಪುರ: ಲಕ್ಷ್ಮಿ ಹೆಬ್ಬಾಳ್ಕರ್ ಸಂಸ್ಕಾರವಿಲ್ಲದ ರಾಜಕಾರಣಿ, ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆರೋಗ್ಯ ಸಚಿವ ಶ್ರೀರಾಮುಲು ಹರಿಹಾಯ್ದಿದ್ದಾರೆ.

ಹೆಬ್ಬಾಳ್ಕರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಲಕ್ಷ್ಮಿ ಹೆಬ್ಬಾಳ್ಕರ್ ಸಂಸ್ಕಾರವಿಲ್ಲದ ರಾಜಕಾರಣಿ, ಪ್ರಚಾರಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿರುತ್ತಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮನೆಯಿಂದಲೇ ಮೊದಲು ಆತ್ಮಹತ್ಯೆ ಶುರುವಾಗಲಿ. ಅವರೇ ಮೊದಲು ಅದಕ್ಕೆ ಚಾಲನೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಬೆಳಗ್ಗೆ ಗೋಕಾಕ್‍ನಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೆರೆ ಸಂತ್ರಸ್ತರ ಭೇಟಿಗೆ ತೆರಳಿದಾಗ ಸಂಘದವರು ಯಾರಾದರೂ ಸಾಲ ವಸೂಲಾತಿಗೆ ಬಂದರೆ, ನೀವು ಸಾಲ ತುಂಬಬೇಡಿ ನಿಮ್ಮ ಹೆಸರು ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿರಿ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಸಂದರ್ಭಕ್ಕನುಗುಣವಾಗಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಾಗುತ್ತದೆ. ಯಾವುದೇ ಸ್ಥಾನಮಾನಗಳು ನಮಗೆ ಗೌರವ ತರುವುದಕ್ಕಿಂತ ಹೆಚ್ಚಾಗಿ ನಾವು ಮಾಡುವ ಕೆಲಸಗಳು ನಮ್ಮನ್ನು ಹೆಚ್ಚು ಗುರುತಿಸುವಂತೆ ಮಾಡುತ್ತವೆ ಎಂದು ಡಿಸಿಎಂ ಹುದ್ದೆ ತಪ್ಪಿರುವುದರ ಕುರಿತು ಸ್ಪಷ್ಟನೆ ನೀಡಿದರು.

ಯಾವುದೇ ಗುರುಗಳು ತಮ್ಮ ಶಿಷ್ಯಂದಿರಿಗೆ ಒಳ್ಳೆಯದಾಗಲು ಬೇಡಿಕೆ ಇಡುವುದು ಸಾಮಾನ್ಯ, ಯಡಿಯೂರಪ್ಪನವರು ನಮ್ಮ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಾರೆ ಎಂಬ ನಂಬಿಕೆ ಇದೆ. ನನಗೆ ಮುಂದೆ ದೊಡ್ಡ ಸ್ಥಾನ ಸಿಗಬಹುದು, ಹೀಗಾಗಿ ನಾನು ಯಾವುದೇ ಸ್ಥಾನಮಾನದ ಆಕಾಂಕ್ಷಿಯಲ್ಲ. ಈ ಹಿಂದೆ ನಾನು ಆರೋಗ್ಯ ಸಚಿವನಾಗಿ ಮಾಡಿದ ಕೆಲಸವನ್ನು ಗುರುತಿಸಿ ಈಗ ಮತ್ತೆ ಅದೇ ಕೆಲಸ ನೀಡಿದ್ದಾರೆ ಎಂದು ತಿಳಿಸಿದರು.

ಎಲ್ಲರೂ ಒಂದೇ: ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ, ಸಚಿವ ಸ್ಥಾನ ನೀಡಿದರ ಕುರಿತು ಪ್ರತಿಕ್ರಿಯಿಸಿದ ಅವರು, ಸಂದರ್ಭಕ್ಕನುಗುಣವಾಗಿ ಪಕ್ಷ ನಿರ್ಣಯ ಕೈಗೊಳ್ಳುತ್ತದೆ. ನಾವು ಅದನ್ನು ಯಾರು ಪ್ರಶ್ನಿಸುವಂತಿಲ್ಲ. ಅಲ್ಲದೆ, ಬಿ.ಎಸ್.ಯಡಿಯೂರಪ್ಪ ಯಾರನ್ನೂ ತುಳಿಯುವ ಪ್ರಯತ್ನ ಮಾಡಿಲ್ಲ. ಪಕ್ಷದಲ್ಲಿ ಎಲ್ಲರೂ ಒಂದೆ, ಇಲ್ಲಿ ಯಾವ ಗುಂಪು ಇಲ್ಲ ಎಂದರು.

ಸಿದ್ದರಾಮಯ್ಯನವರು ಇನ್ನೂ ಮುಖ್ಯಮಂತ್ರಿಯ ಗುಂಗಿನಲ್ಲಿದ್ದಾರೆ. ಈ ಗುಂಗಿನಲ್ಲೇ ವೈಮನಸ್ಸು ಉಂಟಾಗಿ ಅವರ ಸರ್ಕಾರ ಬಿದ್ದಿದೆ. ಹೀಗಾಗಿ ಸಿದ್ದರಾಮಯ್ಯನವರು ಮೊದಲು ವಿರೋಧ ಪಕ್ಷದ ಸ್ಥಾನವನ್ನು ಉಳಿಸಿಕೊಳ್ಳಲಿ, ಸಿಎಂ ಆಸೆಯನ್ನು ಬಿಡಲಿ ಎಂದು ಶ್ರೀರಾಮುಲು ಸಲಹೆ ನೀಡಿದ್ದಾರೆ.

ನೀರು ಕುಡಿಯಲೇಬೇಕು: ಇಡಿ ವಿರುದ್ಧ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಕಾನೂನು ವಿಚಾರಗಳ ಕುರಿತು ಹೆಚ್ಚು ಮಾತನಾಡುವುದಿಲ್ಲ. ಕಾನೂನು ಅದರ ಕೆಲಸವನ್ನು ಮಾಡುತ್ತದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅದು ನಾನಾದರೂ ಸರಿ, ಯಾರಾದರೂ ಸರಿ ಎಂದು ಹೇಳಿದರು.

Comments

Leave a Reply

Your email address will not be published. Required fields are marked *