‘ನೀನು ಇಲ್ಲಿಂದ ಬೇಗ ಹೋಗ್ತೀಯಾ’- ಡಿಸಿಪಿಗೆ ಸಿಎಂ ಸೋದರಳಿಯ ಧಮ್ಕಿ

– ನಾನೇನು ಧಮ್ಕಿ ಹಾಕಿಲ್ಲ ಎಂದು ಆರೋಪ ತಳ್ಳಿಹಾಕಿದ ರಾಜೇಶ್

ಮೈಸೂರು: ಭದ್ರತೆ ದೃಷ್ಟಿಯಿಂದ ಚಾಮುಂಡಿ ದೇಗುಲದ ಒಳಗೆ ಬಿಡಲು ನಿರಾಕರಿಸಿ ಪೊಲೀಸರಿಗೆ ಸಿಎಂ ಯಡಿಯೂರಪ್ಪ ಅವರ ತಂಗಿ ಮಗ ರಾಜೇಶ್ ಧಮ್ಕಿ ಹಾಕಿದ್ದಾರೆ. ನೀನು ಇಲ್ಲಿಂದ ಬೇಗ ಹೋಗ್ತೀಯಾ. ನಿನ್ನ ಮೇಲೆ ದೂರು ಕೊಡುತ್ತೇನೆ ಎಂದು ಹೇಳಿ ದರ್ಪ ಮೆರೆದಿದ್ದಾರೆ.

ಕೆಆರ್‍ಎಸ್ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಸಲ್ಲಿಸುವ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಮೈಸೂರು ಪ್ರವಾಸದಲ್ಲಿರುವ ಸಿಎಂ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಭದ್ರತೆಯ ಉದ್ದೇಶದಿಂದ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು.

ದೇವಾಲಯದ ಒಳಗೆ ಬಿಡದಿದ್ದಕ್ಕೆ ರಾಜೇಶ್ ಹಾಗೂ ಬಿಜೆಪಿ ಕಾರ್ಯಕರ್ತ ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ದೇವಸ್ಥಾನದಲ್ಲಿ ಸಿಎಂ ಆಗೂ ಇತರೆ ಸಚಿವರು ಪೂಜೆ ಸಲ್ಲಿಸುತ್ತಿದ್ದ ಕಾರಣಕ್ಕೆ ಭದ್ರತಾ ದೃಷ್ಟಿಯಿಂದ ರಾಜೇಶ್ ಹಾಗೂ ಅವರೊಟ್ಟಿಗೆ ಇದ್ದ ಕಾರ್ಯಕರ್ತರನ್ನು ಪೊಲೀಸರು ಒಳಗೆ ಬಿಟ್ಟಿರಲಿಲ್ಲ. ಇಷ್ಟಕ್ಕೆ ಸಿಟ್ಟಿಗೆದ್ದ ರಾಜೇಶ್ ಅವರು ಕರ್ತವ್ಯ ನಿರತ ಡಿಸಿಪಿಗೆ ಏಕವಚನದಲ್ಲೇ ಅವಾಜ್ ಹಾಕಿ ದರ್ಪ ಪ್ರದರ್ಶಿಸಿದ್ದಾರೆ. ನೀನು ಇಲ್ಲಿಂದ ಬೇಗ ಹೋಗ್ತೀಯಾ ಎಂದು ಕೂಗಾಡಿ ಅಧಿಕಾರಿಯನ್ನು ವರ್ಗಾವಣೆ ಮಾಡುವುದಾಗಿ ಸಿಎಂ ಸೋದರಳಿಯ ಅವಾಜ್ ಹಾಕಿದ್ದಾರೆ.

ನಂತರ ಬಿಜೆಪಿ ಕಾರ್ಯಕರ್ತನೊಬ್ಬ ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ. ಸಿಎಂ ನಮ್ಮ ಮನೆಗೆ ಬರುತ್ತಾರೆ. ಆಗ ವೈಯಕ್ತಿಕವಾಗಿ ನಿನ್ನ ವಿರುದ್ಧ ದೂರು ಕೊಡುತ್ತೇನೆ ಎಂದು ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾನೆ. ಸಿಎಂ ಸೋದರಳಿಯ ಹಾಗೂ ಕಾರ್ಯಕರ್ತ ಪೊಲೀಸರ ಮೇಲೆ ದರ್ಪ ತೋರಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ರಾಜೇಶ್ ಅವರು ಮಾತನಾಡಿ, ನಾನು ಯಾರಿಗೂ ಅವಾಜ್ ಹಾಕಿಲ್ಲ. ನನಗೆ ಅಲ್ಲಿದ್ದ ಪೊಲೀಸ್ ಅಧಿಕಾರಿಗಳ ಪರಿಚಯವಿದೆ. ನಾನು ಅಲ್ಲಿ ಒಳಗೆ ಬಿಡಿ ಎಂದು ಮನವಿ ಮಾಡಿದ್ದೆ ಅಷ್ಟೇ. ಆಗ ನಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕೂಗಿದ್ದಾರೆ. ನಾನು ಯಾರಿಗೂ ಧಮ್ಕಿ ಹಾಕಿಲ್ಲ. ನೀವು ಹೇಗಾದರೂ ಬಿಂಬಿಸಿ ನಾನು ಅವಾಜ್ ಹಾಕಿಲ್ಲ. ನಮ್ಮ ಜನಪರ ಕೆಲಸಗಳನ್ನು ನೀವು ತೋರಿಸಲ್ಲ. ಇಂತಹ ಚಿಕ್ಕಪುಟ್ಟ ವಿಚಾರವನ್ನು ಎತ್ತಿ ತೋರಿಸುತ್ತೀರ. ಒಳಗೆ ಬಿಡಲ್ಲ ಎಂದಿದಕ್ಕೆ ಕಾರ್ಯಕರ್ತರು, ಬೆಂಬಲಿಗರು ಆಕ್ರೋಶಗೊಂಡು ಕೂಗಾಡಿದ್ದಾರೆ. ನಾನು ಪೊಲೀಸರಿಗೆ ಬೆದರಿಕೆ ಹಾಕಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

Comments

Leave a Reply

Your email address will not be published. Required fields are marked *