ಯಶಸ್ಸಿಗಾಗಿ ಲಿಫ್ಟ್ ಅಲ್ಲ, ಮೆಟ್ಟಿಲು ಬಳಸಿ- ಫಿಟ್ ಇಂಡಿಯಾಗೆ ಮೋದಿ ಚಾಲನೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಫಿಟ್ ಇಂಡಿಯಾ ಅಭಿಯಾನ ಚಾಲನೆ ನೀಡಿ ರಾಷ್ಟ್ರದ ಜನರು ಸದೃಢರಾಗುವಂತೆ ಕೋರಿಕೊಂಡಿದ್ದಾರೆ.

ಇಂದು ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಶಸ್ಸಿಗಾಗಿ ಲಿಫ್ಟ್ ಅಲ್ಲ, ಮೆಟ್ಟಿಲುಗಳನ್ನು ಬಳಸಿ ಫಿಟ್ ಆಗಿರಬೇಕು ಎಂದು ಕರೆಕೊಟ್ಟರು.

ಸಚಿವರು, ಶಾಲಾ ಮಕ್ಕಳು ಮತ್ತು ಸೆಲೆಬ್ರಿಟಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅದು ಬೋರ್ಡ್ ರೂಮ್ ಆಗಿರಲಿ ಬಾಲಿವುಡ್ ಆಗಿರಲಿ ನಾವು ಫಿಟ್ ಆಗಿರಬೇಕು. ನಮಗೆ ಫಿಟ್ ಆದ ದೇಹವಿದ್ದರೆ. ಮನಸ್ಸು ನಿಯಂತ್ರಣದಲ್ಲಿರುತ್ತದೆ. ಈ ಫಿಟ್ ಇಂಡಿಯಾ ಚಾಲೆಂಜ್ ಅನ್ನು ಎಲ್ಲರೂ ಸ್ವೀಕರಿಸಬೇಕು. ‘ಸ್ವಚ್ಛ ಭಾರತ್’ ಅಭಿಯಾನದಂತೆ ಇದನ್ನು ಎಲ್ಲರೂ ಸ್ವೀಕಾರ ಮಾಡಿ ಎಂದು ಜನರಲ್ಲಿ ಮೋದಿ ಕೋರಿಕೊಂಡರು.

ನಾವು ಫಿಟ್‍ನೆಸ್ ಅನ್ನು ಜೀವನದ ಮಂತ್ರವಾಗಿ ಮಾಡಿಕೊಳ್ಳಬೇಕು. ನಾವು ಆಹಾರ ಪದ್ಧತಿ ಮತ್ತು ದೇಹದ ಫಿಟ್‍ನೆಸ್ ಬಗ್ಗೆ ಮಾತನಾಡುತ್ತೇವೆ ಆದರೆ ಊಟದ ಟೇಬಲ್ ಬಳಿ ಬಂದಾಗ ನಾವು ಅದನ್ನು ಪಾಲಿಸುವುದಿಲ್ಲ. ಈಗಿನ ನಮ್ಮ ಯಂತ್ರಚಾಲಿತ ಜೀವನ ಶೈಲಿಗೆ ನಮ್ಮ ತಂತ್ರಜ್ಞಾನವು ಬಹುದೊಡ್ಡ ಕಾರಣ. ಕೆಲವು ದಶಕಗಳ ಹಿಂದೆ, ಒಬ್ಬ ಸಾಮಾನ್ಯ ವ್ಯಕ್ತಿಯು ದಿನದಲ್ಲಿ 8-10 ಕಿ.ಮೀ ನಡೆಯುತ್ತಿದ್ದ, ಸೈಕ್ಲಿಂಗ್ ಮಾಡುತ್ತಿದ್ದ ಅಥವಾ ಓಡುತ್ತಿದ್ದನು. ಆದರೆ ಈಗ ತಂತ್ರಜ್ಞಾನದಿಂದ ಈ ಎಲ್ಲಾ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ನಾವು ಈಗ ಕಡಿಮೆ ನಡೆಯುತ್ತೇವೆ ಎಂದು ಮೋದಿ ಹೇಳಿದರು.

ತಮ್ಮ ದೈನಂದಿನ ದಿನಚರಿಯಲ್ಲಿ ದಿನ ಯೋಗ ಮಾಡುವ ಮೋದಿ ಅವರು ಜನರು ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ. ನಾವು ಹಿಂದಿನ ಕಾಲದಲ್ಲಿ 60 ವರ್ಷ ಆದ ನಂತರ ಹೃದಯಾಘಾತವಾಗುತ್ತದೆ ಎಂದು ಕೇಳಿದ್ದವು. ಆದರೆ ಈಗ 30, 40 ವರ್ಷಕ್ಕೆ ಜನರು ಹೃದಯಾಘಾತದಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಜೀವನ ಶೈಲಿ. ನಮ್ಮ ಜೀವನದಲ್ಲಿ ನಾವು ಮಾಡಿಕೊಂಡ ಸಣ್ಣ ಬದಲಾವಣೆ ನಮ್ಮ ಜೀವನದಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.

ಈ ಫಿಟ್ ಇಂಡಿಯಾ ಚಳುವಳಿಯು ರಾಷ್ಟ್ರೀಯ ಕ್ರೀಡಾದಿನವನ್ನು ಸೂಚಿಸುತ್ತದೆ. ರಾಷ್ಟ್ರದ ಜನರ ದೈನಂದಿನ ದಿನದಲ್ಲಿ ದೈಹಿಕ ಚಟುವಟಿಕೆಗಳು ಮತ್ತು ಕ್ರೀಡೆಯನ್ನು ಪ್ರೋತ್ಸಾಹಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

Comments

Leave a Reply

Your email address will not be published. Required fields are marked *