ತಲೆ ಕೆಳಗಾಗಿ ಯೋಗ ಮಾಡಲು ಹೋಗಿ 80 ಅಡಿ ಎತ್ತರದಿಂದ ಬಿದ್ದ ಯುವತಿ

– 110 ಮೂಳೆ ಮುರಿತ, ಯುವತಿ ಸ್ಥಿತಿ ಗಂಭೀರ

ಮೆಕ್ಸಿಕೋ: ಯುವತಿಯೊಬ್ಬಳು ಬಾಲ್ಕನಿಯಲ್ಲಿ ತಲೆ ಕೆಳಗಾಗಿ ಯೋಗ ಮಾಡಲು ಹೋಗಿ, ಆಯತಪ್ಪಿ 80 ಅಡಿ ಮೇಲಿಂದ ಕೆಳಗೆ ಬಿದ್ದು, 110 ಮೂಳೆಗಳನ್ನು ಮುರಿದುಕೊಂಡಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

ಅಲೆಕ್ಸಾ ಟೆರಾಜಾ(23) ತಲೆ ಕೆಳಗಾಗಿ ಯೋಗ ಮಾಡಲು ಹೋಗಿ ಆಸ್ಪತ್ರೆ ಸೇರಿದ್ದಾಳೆ. ಅಲೆಕ್ಸಾ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯಲ್ಲಿರುವ ತನ್ನ ಮನೆಯ ಬಾಲ್ಕನಿಯ ಕಂಬಿಯ ಮೇಲೆ ತಲೆ ಕೆಳಗೆ ಮಾಡಿ, ಕಾಲಿನಿಂದ ಕಂಬಿ ಹಿಡಿದು ಸಾಹಸ ಮಾಡುತ್ತಾ ಯೋಗ ಮಾಡಲು ಹೋಗಿದ್ದಾಳೆ. ಆದರೆ ಈ ವೇಳೆ ಆಯತಪ್ಪಿ ಅಲೆಕ್ಸಾ ಬಾಲ್ಕನಿಯಿಂದ 80 ಅಡಿ ಕೆಳಗೆ ಬಿದ್ದಿದ್ದಾಳೆ. ಪರಿಣಾಮ ಆಕೆಯ ದೇಹದ 110 ಮೂಳೆಗಳು ಮುರಿದಿದೆ, ಜೊತೆಗೆ ತಲೆಗೆ ಕೂಡ ಗಂಭಿರವಾಗಿ ಪೆಟ್ಟಾಗಿದೆ.

ಈ ಅಪಾಯಕಾರಿ ಸಾಹಸವನ್ನು ಅಲೆಕ್ಸಾ ಮಾಡುತ್ತಿರುವ ಫೋಟೋವನ್ನು ಆಕೆಯ ಸ್ನೇಹಿತ ಕ್ಲಿಕ್ಕಿಸಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ.

ಯುವತಿ ಕೆಳಗೆ ಬಿದ್ದ ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ತೀವ್ರ ಗಾಯಗೊಂಡ ಕಾರಣಕ್ಕೆ ವೈದ್ಯರು ಆಕೆಯ ಶಸ್ತ್ರಚಿಕಿತ್ಸೆ ಕೂಡ ಮಾಡಿದ್ದಾರೆ. ಬಹಳ ಎತ್ತರದಿಂದ ಬಿದ್ದ ಪರಿಣಾಮ ಆಕೆಯ ಮಂಡಿ ಮತ್ತು ಪಾದದ ಕೀಲುಗಳಿಗೆ ಹಾನಿಯಾಗಿತ್ತು. ಆದ್ದರಿಂದ ಅವುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಮರುಜೋಡಣೆ ಮಾಡಲಾಗಿದೆ. ಹೀಗಾಗಿ ಆಕೆ ಮೂರು ವರ್ಷ ನಡೆದಾಡಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಯುವತಿಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಬರೋಬ್ಬರಿ 11 ಗಂಟೆ ಸಮಯ ತೆಗೆದುಕೊಂಡಿದ್ದಾರೆ.

ಯುವತಿ ಕೆಳಗೆ ಬಿದ್ದಾಗ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗಿದೆ. ಹೀಗಾಗಿ ಆಕೆಗೆ ರಕ್ತದ ಅವಶ್ಯಕತೆ ಇದೆ. ಆದ್ದರಿಂದ ಅಲೆಕ್ಸಾ ಕುಟುಂಬಸ್ಥರು ರಕ್ತದಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ನೂರು ಮಂದಿ ರಕ್ತದಾನ ಮಾಡಲು ಮುಂದೆ ಬಂದಿದ್ದಾರೆ. ಸದ್ಯ ಯುವತಿ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *