ಭಾವಿ ಪತ್ನಿಯಿಂದ ಲಂಚ ಸ್ವೀಕರಿಸಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾದ ಇನ್ಸ್‌ಪೆಕ್ಟರ್

ಜೈಪುರ: ರಾಜಸ್ಥಾನದ ಪೊಲೀಸ್ ಅಧಿಕಾರಿಯೊಬ್ಬರು ಕ್ರಿಯೇಟಿವಿಟಿ ತೋರಿಸಲು ತಮ್ಮ ಭಾವಿ ಪತ್ನಿಯಿಂದ ಲಂಚ ಸ್ವೀಕರಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.

ಮದುವೆಗೂ ಮುನ್ನ ಪ್ರಿ ವೆಡ್ಡಿಂಗ್ ವಿಡಿಯೋ ಶೂಟ್ ಮಾಡುವ ಟ್ರೆಂಡ್ ಈಗ ಜಾಸ್ತಿ ಆಗುತ್ತಿದೆ. ಇದೇ ರೀತಿ ವಿಭಿನ್ನವಾಗಿ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗಳಿಸಲೆಂದು ವಿಡಿಯೋ ಮಾಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಈಗ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಉದಯ್‍ಪುರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಧನ್‍ಪತ್ ಪತ್ನಿಯ ಜೊತೆ ಲವ್ ಸಂಬಂಧವನ್ನು ತೋರಿಸಲು ಪ್ರಿ ವೆಡ್ಡಿಂಗ್ ವಿಡಿಯೋ ಶೂಟ್ ಮಾಡಿಸಿದ್ದರು. ವಿಡಿಯೋದಲ್ಲಿ ಪತ್ನಿಯಾಗಿರುವ ಕಿರಣ್ ಸ್ಕೂಟಿಯೊಂದನ್ನು ಹತ್ತಿ ರಸ್ತೆಯಲ್ಲಿ ಬರುತ್ತಿರುತ್ತಾಳೆ. ಈ ಸಂದರ್ಭದಲ್ಲಿ ಧನ್‍ಪತ್ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿರುತ್ತಾರೆ. ಹೆಲ್ಮೆಟ್ ಹಾಕದೇ ಇರುವುದನ್ನು ಕಂಡು ಕಿರಣ್ ಗೆ ಗಾಡಿ ನಿಲ್ಲಿಸಲು ಸೂಚಿಸುತ್ತಾರೆ.

ಇದಾದ ಬಳಿಕ ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸಿದ್ದಕ್ಕಾಗಿ ಕಿರಣ್‍ಗೆ ಧನಪತ್ ದಂಡ ವಿಧಿಸುತ್ತಾರೆ. ಆದರೆ ಕಿರಣ್ ದಂಡ ಪಾವತಿಸದೇ ಧನಪತ್ ಅವರ ಕಿಸೆಗೆ ನೋಟು ತುರುಕಿದ್ದಾಳೆ. ನೋಟು ಬಿದ್ದ ನಂತರ ಅಚ್ಚರಿಗೊಂಡು ಆಕೆಯನ್ನು ನೋಡುತ್ತಾ ಧನ್‍ಪತ್ ನಿಂತಿದ್ದಾಗ ಅವರ ಪರ್ಸ್ ಕಿತ್ತುಕೊಂಡು ಕಿರಣ್ ಪರಾರಿಯಾಗಿದ್ದಳು.

ಈ ಪರ್ಸ್ ಪತ್ತೆ ಹಚ್ಚಿ ಕಿರಣ್‍ಳನ್ನು ಧನ್‍ಪತ್ ಭೇಟಿಯಾಗುತ್ತಾರೆ. ಈ ಭೇಟಿಯ ಬಳಿಕ ಇಬ್ಬರ ನಡುವೆ ಮಾತುಕತೆ ಆರಂಭವಾಗಿ ನಂತರ ಅದು ಪ್ರೀತಿಗೆ ತಿರುಗುತ್ತದೆ. ಈ ಲವ್ ಸ್ಟೋರಿಯ ವಿಡಿಯೋ ಯೂ ಟ್ಯೂಬಿಗೆ ಅಪ್ಲೋಡ್ ಆಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕೆಂಡಾಮಂಡಲವಾಗಿದ್ದಾರೆ.

ಸಮವಸ್ತ್ರವನ್ನು ದುರುಪಯೋಗಪಡಿಸಿಕೊಂಡಿದ್ದು ಮಾತ್ರವಲ್ಲದೇ ಪತ್ನಿಯಿಂದ ಲಂಚ ಸ್ವೀಕರಿಸುವ ಮೂಲಕ ಪೊಲೀಸ್ ಇಲಾಖೆಗೆ ಧನ್‍ಪತ್ ಅಗೌರವ ತೋರಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಐಜಿಪಿ ಡಾ. ಹವಾ ಸಿಂಗ್ ಘೋಮಾರಿಯಾ ಎಲ್ಲಾ ವಲಯಗಳ ಇನ್ಸ್‌ಪೆಕ್ಟರ್ ಅವರಿಗೆ ನೋಟಿಸ್ ಜಾರಿ ಮಾಡಿ, ಪೊಲೀಸ್ ಸಮವಸ್ತ್ರವನ್ನು ದುರುಪಯೋಗಪಡಿಸಿಕೊಳ್ಳುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಚರ್ಚೆ ಜೋರಾಗುತ್ತಿದ್ದಂತೆ ಯೂಟ್ಯೂಬ್‍ನಿಂದ ಈಗ ಈ ವಿಡಿಯೋವನ್ನು ತೆಗೆದು ಹಾಕಲಾಗಿದೆ.

Comments

Leave a Reply

Your email address will not be published. Required fields are marked *