ದಯವಿಟ್ಟು ಯಾರೂ ಪ್ರತಿಭಟನೆ ಮಾಡ್ಬೇಡಿ- ಶ್ರೀರಾಮುಲು ಮನವಿ

ಬೆಂಗಳೂರು/ಬಳ್ಳಾರಿ: ಬಿ. ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿಲ್ಲವೆಂದು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದು, ಇದನ್ನು ಆರೋಗ್ಯ ಸಚಿವರು ಖಂಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಶ್ರೀರಾಮುಲು, ನನಗೆ ಯಾವುದೇ ಅಸಮಾಧಾನವಾಗಿಲ್ಲ. ಹೀಗಾಗಿ ದಯವಿಟ್ಟು ನನ್ನ ಪರವಾಗಿ ಪ್ರತಿಭಟನೆಗಳನ್ನು ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಟ್ವಿಟ್ ನಲ್ಲೇನಿದೆ..?
`ನನಗೆ ಅಸಮಾಧಾನವಾಗಿದೆ ಎಂದು ನಮ್ಮ ಪಕ್ಷದ ವಿರುದ್ಧ ನಡೆಯುತ್ತಿರುವ ಯಾವುದೇ ಪ್ರತಿಭಟನೆಯನ್ನು ನಾನು ಖಂಡಿಸುತ್ತೇನೆ. ಇದು ಸರಿಯಲ್ಲ, ದಯವಿಟ್ಟು ಯಾರೂ ಹೀಗೆ ಮಾಡಬಾರದು ಎಂದು ನಾನು ಮನವಿ ಮಾಡುತ್ತೇನೆ. ಬಿಜೆಪಿ ಕಾರ್ಯಕರ್ತರಿಗೆ ಪಕ್ಷ ಮೊದಲು. ಪಕ್ಷದ ಎಲ್ಲ ತೀರ್ಮಾನಗಳಿಗೆ ನಾನು ಯಾವಾಗಲೂ ಬದ್ಧನಾಗಿರುತ್ತೇನೆ’ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ರಾಮುಲು ಅವರು ಪಕ್ಷ ನಿಷ್ಠೆ ತೋರಿದ್ದಾರೆ.

ಬಳ್ಳಾರಿ, ಕೊಪ್ಪಳ ಹಾಗೂ ಚಿತ್ರದುರ್ಗದಲ್ಲಿ ಶ್ರೀರಾಮುಲು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಬಳ್ಳಾರಿಯ ಹೊಸಪೇಟೆಯಲ್ಲಿ ಶ್ರೀ ರಾಮುಲು ಅಭಿಮಾನಿಗಳು ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದ್ದರು. ನಗರದ ರೋಟರಿ ವೃತ್ತದಲ್ಲಿ ಟೈಯರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.

ಶ್ರೀ ರಾಮುಲುಗೆ ಡಿ.ಸಿ.ಎಂ ಪಟ್ಟ ನೀಡುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದು, ಶ್ರೀ ರಾಮುಲುಗೆ ಆಗಿರುವ ಅನ್ಯಾಯ ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯವಾಗಿದೆ. ದಕ್ಷಿಣ ಕರ್ನಾಟಕದವರೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಆಗಬೇಕಾ ಎಂದು ನೂರಾರು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದರು.

ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿದರೆ ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ಕೂಗು ಏಳುತ್ತದೆ ಎಂದು ಇದೇ ವೇಳೆ ಎಚ್ಚರಿಕೆಯನ್ನೂ ನೀಡಿದ್ದರು. ಒಟ್ಟಿನಲ್ಲಿ ಶ್ರೀ ರಾಮುಲು ಉತ್ತರ ಕರ್ನಾಟಕದ ಜನಪ್ರಿಯ ನಾಯಕರಾಗಿದ್ದು, ಅವರಿಗೆ ಡಿಸಿಎಂ ಸ್ಥಾನ ನೀಡಲೇಬೇಕೆಂದು ಪಟ್ಟು ಹಿಡಿದಿದ್ದರು.

Comments

Leave a Reply

Your email address will not be published. Required fields are marked *