ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿ ಧಗಧಗ – ಬಯಸಿದ ಖಾತೆ ಸಿಗದಿದ್ದಕ್ಕೆ ಭುಗಿಲೆದ್ದ ಭಿನ್ನಮತ

– ಸಚಿವ ಸ್ಥಾನ ತೊರಿತಾರಾ ಹಿರಿಯರು?

ಬೆಂಗಳೂರು: ಸಚಿವ ಸಂಪುಟ ರಚನೆಯಾಗಿ ಕೆಲ ದಿನಗಳ ಬಳಿಕ ಇದೀಗ ಖಾತೆ ಹಂಚಿಕೆಯೂ ಆಯ್ತು. ಆದರೆ ಖಾತೆ ಹಂಚಿಕೆ ಕೆಲವು ಸಚಿವರಿಗೆ ತೃಪ್ತಿ ತಂದಿಲ್ಲ. ಹೀಗಾಗಿ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಹೌದು. ಖಾತೆ ಹಂಚಿಕೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನಗಳು ಸ್ಫೋಟಗೊಂಡಿದ್ದು, ಇದೀಗ ಸಿ.ಟಿ.ರವಿ, ಆರ್.ಅಶೋಕ್, ವಿ.ಸೋಮಣ್ಣ ಹಾಗೂ ಜಗದೀಶ್ ಶೆಟ್ಟರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಯಸಿದ ಖಾತೆಯೇ ಬೇರೆ, ಸಿಕ್ಕ ಖಾತೆಯೇ ಬೇರೆಯದ್ದಾಗಿದೆ. ಹೀಗಾಗಿ ಕೆಲವರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೆಳಲಾಗುತ್ತಿದೆ. ಇದಕ್ಕೆ ಪುಷ್ಟಿ ಎಂಬಂತೆ ಸಿಟಿ ರವಿ ಹಾಗೂ ಆರ್ ಅಶೋಕ್ ಅವರು ಈಗಾಗಲೇ ತಮಗೆ ನೀಡಿದ್ದ ಸರ್ಕಾರಿ ಕಾರನ್ನು ವಾಪಸ್ ಮಾಡಿದ್ದಾರೆ ಎನ್ನಲಾಗಿದೆ.

ಸಚಿವರುಗಳು ಕೇಳಿದ ಖಾತೆ ಯಾವುವು?
* ಸಿ.ಟಿ ರವಿ ಕೇಳಿದ್ದು ಉನ್ನತ ಶಿಕ್ಷಣ – ಕೊಟ್ಟಿದ್ದು ಪ್ರವಾಸೋದ್ಯಮ, ಕನ್ನಡ/ಸಂಸ್ಕೃತಿ
* ಆರ್.ಅಶೋಕ್ ಕೇಳಿದ್ದು ಬೆಂಗಳೂರು ನಗರಾಭಿವೃದ್ಧಿ – ಕೊಟ್ಟಿದ್ದು ಕಂದಾಯ
* ಜಗದೀಶ್ ಶೆಟ್ಟರ್ ಕೇಳಿದ್ದು ಕಂದಾಯ – ಬೃಹತ್, ಮಧ್ಯಮ ಕೈಗಾರಿಕೆ
* ವಿ.ಸೋಮಣ್ಣ ಕೇಳಿದ್ದು ನಗರಾಭಿವೃದ್ಧಿ – ಕೊಟ್ಟಿದ್ದು ವಸತಿ

ಕಂದಾಯ ಅಥವಾ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಜಗದೀಶ್ ಶೆಟ್ಟರ್ ಬಯಸಿದ್ದರು. ಆದರೆ ಅವರ ಪಾಲಿಗೆ ಬೃಹತ್/ಮಧ್ಯಮ ಕೈಗಾರಿಕಾ ಖಾತೆ ಸಿಕ್ಕಿದೆ. ತಮ್ಮ ಜಾಯಮಾನಕ್ಕೆ ಒಗ್ಗದ ಖಾತೆ ಕೊಟ್ಟಿದ್ದಾರೆ ಎಂದು ಶೆಟ್ಟರ್ ಅಳಲು ತೋಡಿಕೊಂಡಿದ್ದಾರೆ. ಇತ್ತ ವಿ ಸೋಮಣ್ಣ ಅವರು ನಗರಾಭಿವೃದ್ಧಿ ಇಲಾಖೆ ಕೇಳಿದ್ದರು. ಆದರೆ ಅವರಿಗೆ ವಸತಿ ಇಲಾಖೆ ಸಿಕ್ಕಿದೆ. ಈ ಹಿಂದೆಯೂ ವಸತಿ ಇಲಾಖೆಯನ್ನೇ ಸೋಮಣ್ಣ ನಿಭಾಯಿಸಿದ್ದರು. ಇದೆಲ್ಲಕ್ಕಿಂತ ಮೇಲಾಗಿ ಡಿಸಿಎಂ ಹುದ್ದೆಗೆ ತಮ್ಮನ್ನು ಪರಿಗಣಿಸಿಲ್ಲ. ತಮ್ಮ ಹಿರಿತನ, ಸಾಮಥ್ರ್ಯ ಪರಿಗಣಿಸಿಲ್ಲ ಎಂದು ಒಳಗೊಳಗೇ ಅತೃಪ್ತರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಮೂವರು ಡಿಸಿಎಂ, ಬೊಮ್ಮಾಯಿಗೆ ಗೃಹ, ಸವದಿಗೆ ಸಾರಿಗೆ – ಯಾರಿಗೆ ಯಾವ ಖಾತೆ?

ಒಟ್ಟಿನಲ್ಲಿ ಬಿಜೆಪಿ ಸಚಿವರಲ್ಲಿ ಈಗ ಖಾತೆ ಕಳವಳ ಉಂಟಾಗಿದೆ. ಬಯಸದ ಖಾತೆ ಸಿಕ್ಕಿದ್ದರಿಂದ ಹಿರಿಯ ಸಚಿವರು ಹೈಕಮಾಂಡ್ ನಿರ್ಧಾರದ ವಿರುದ್ಧವೇ ಸಿಡಿದು ನಿಂತಿದ್ದಾರೆ. ಖಾತೆ ಹಂಚಿಕೆ ಹಿರಿಯ ಸಚಿವರಿಗೆ ತೃಪ್ತಿ ತಂದಿಲ್ಲವೆಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *