ಮೇಲುಕೋಟೆಯಲ್ಲಿ ಸರಣಿ ಕಳ್ಳತನ – ದೇವರ ತಾಳಿಯನ್ನೂ ಬಿಡದೆ ಕದ್ದೊಯ್ದ ಖದೀಮರು

ಮಂಡ್ಯ: ಪ್ರಮುಖ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಸರಣಿ ಕಳ್ಳತನ ನಡೆದಿದ್ದು, ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್, ಸಾವಿರಾರು ರೂ. ನಗದು ಜೊತೆಗೆ ದೇವರ ತಾಳಿಯನ್ನೂ ಬಿಡದೆ ಖದೀಮರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ದೇವಾಲಯಗಳು ಹಾಗೂ ಮನೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ಮೇಲುಕೋಟೆಯ ಪ್ರಮುಖ ರಸ್ತೆಯಲ್ಲಿರುವ ಕಾಳಮ್ಮ, ಮುಕ್ತಿನಾಥ, ಶನೇಶ್ವರ ದೇಗುಲದಲ್ಲಿ ಹುಂಡಿ ಹಾಗೂ ಇತರೆ ವಸ್ತುಗಳ ಕಳ್ಳತನ ಮಾಡಿದ್ದಾರೆ. ಕಾಳಮ್ಮ ದೇಗುಲದಲ್ಲಿ ದೇವರ 3 ತಾಳಿ, 5 ಸಾವಿರ ನಗದು ಹಣವನ್ನು ದೋಚಿದ್ದಾರೆ. ಹಾಗೆಯೇ ಶನೇಶ್ವರ ದೇಗುಲದಲ್ಲಿ ಐವತ್ತು ಸಾವಿರ ರೂ. ಕಳವು ಮಾಡಿದ್ದಾರೆ.

ಸ್ಥಳೀಯ ನಿವಾಸಿ ಭಾನುಮತಿ ಅವರ ಮನೆಯಲ್ಲಿ 1.20 ಲಕ್ಷ ನಗದು ಜೊತೆಗೆ ಸಾವಿರಾರು ರೂ. ಮೌಲ್ಯದ ರೇಷ್ಮೆ ಸೀರೆಗಳನ್ನು ಕಳ್ಳರು ದೋಚಿದ್ದಾರೆ. ಕೆಎಸ್‌ಆರ್‌ಟಿಸಿ ಚಾಲಕ ರಂಗನಾಥ್ ಅವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದು ತಮ್ಮ ಕೈಚಳಕ ತೋರಿದ್ದಾರೆ.

ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *