ಮೋದಿ ವಿರುದ್ಧ ವ್ಯಕ್ತಿಗತ ನಿಂದನೆ ಬೇಡ: ‘ಕೈ’ ಮುಖಂಡ ಸಿಂಘ್ವಿ

ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಬೆನ್ನಲ್ಲೇ ಮತ್ತೊಬ್ಬ ‘ಕೈ’ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟ್ ಬೀಸಿದ್ದಾರೆ.

ಕಾಂಗ್ರೆಸ್‍ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ವ್ಯಕ್ತಿಗತವಾಗಿ ನಿಂದಿಸುವುದು ಸರಿಯಲ್ಲ. ಅವರು ರಾಷ್ಟ್ರದ ಪ್ರಧಾನಿಯಾಗಿದ್ದು, ಪ್ರತಿ ನಡೆಯಲ್ಲೂ ಉತ್ತಮ, ಕಳಪೆ, ವಿರೋಧಗಳಿರುತ್ತವೆ. ಆದರೆ ಅದನ್ನು ವ್ಯಕ್ತಿಗತವಾಗಿ ನೋಡದೆ, ವಿಷಯಾಧಾರಿತವಾಗಿ ವಿಮರ್ಶಿಸಬೇಕಾಗಿದೆ. ಪಕ್ಷದ ಮುಖಂಡ ಜೈರಾಮ್ ರಮೇಶ್ ಹೇಳಿರುವ ಮಾತಿನಲ್ಲಿ ಅರ್ಥವಿದೆ. ನರೇಂದ್ರ ಮೋದಿ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದ ಉಜ್ವಲ ಯೋಜನೆ ನಿಜಕ್ಕೂ ಉತ್ತಮ ಕಾರ್ಯ. ಮೋದಿ ಅವರ ವಿರುದ್ಧ ಮಾತನಾಡುವುದರಿಂದ ಅವರಿಗೆ ಮತ್ತಷ್ಟು ಪ್ರಚಾರ ಸಿಕ್ಕಂತೆ ಆಗುತ್ತೆ  ಎಂದು ಟ್ವೀಟ್ ಮಾಡಿದ್ದಾರೆ.

ಜೈರಾಮ್ ರಮೇಶ್ ಅವರ ಮಾತುಗಳನ್ನು ಸಮರ್ಥಿಸಿಕೊಂಡು ಅಭಿಷೇಕ್ ಮನು ಸಿಂಘ್ವಿ ಅವರು ಪ್ರಧಾನಿ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೈರಾಮ್ ಹಾಗೂ ಅಭಿಷೇಕ್ ಮನು ಸಿಂಘ್ವಿ ಅವರ ನಡೆಯ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಹಿಂದೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಜಮ್ಮು-ಕಾಶ್ಮೀರ ವಿಶೇಷ ಸ್ಥಾನವನ್ನು ರದ್ದು ಮಾಡಿದ್ದಕ್ಕೆ ಪ್ರಧಾನಿ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಜೈರಾಮ್ ಹೇಳಿದ್ದೇನು?:
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ಮಾಡಿರುವ ಕೆಲಸಗಳನ್ನು ಗುರುತಿಸಬೇಕಾಗಿದೆ. ಈ ಬಗ್ಗೆ ಟೀಕೆ ಮಾಡುವ ಬದಲು ಅವುಗಳ ಅಧ್ಯಯನ ಮಾಡಬೇಕಾಗಿದೆ. ಅವರು ಜನರಿಗೆ ಹತ್ತಿರವಾಗುವ ಕೆಲಸ ಮಾಡಿದ್ದಾರೆ. ಹೀಗಾಗಿಯೇ 2019ರಲ್ಲಿ ಶೇಕಡ 30ರಷ್ಟು ಹೆಚ್ಚು ಮಂದಿ ಮೋದಿ ಮೆಚ್ಚಿಕೊಂಡಿದ್ದಾರೆ ಎಂದು ಜೈರಾಮ್ ರಮೇಶ್  ತಿಳಿಸಿದ್ದರು.

ಪ್ರಧಾನಿ ಮೋದಿ ಅವರನ್ನು ಸದಾ ಟೀಕಿಸುತ್ತಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರು ಮಾಡಿರುವ ಕೆಲಸಗಳ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ. ಅಧ್ಯಯನ ಮಾಡಬೇಕಾಗಿದೆ. ಜನರನ್ನು ಸೆಳೆಯುವ ಕಲೆ ಮೋದಿ ಅವರಲ್ಲಿ ಮನೆ ಮಾಡಿದೆ. ಹೀಗಾಗಿ ಅವರನ್ನು ಜನ ವಿಶ್ವಾಸದಿಂದ ಕಾಣುತ್ತಾರೆ, ನಂಬುತ್ತಾರೆ. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದರು.

Comments

Leave a Reply

Your email address will not be published. Required fields are marked *