ಕುತ್ತಿಗೆ ಸೀಳಿದ ಗಾಳಿಪಟದ ದಾರ- ಸಿವಿಲ್ ಎಂಜಿನಿಯರ್ ದುರ್ಮರಣ

ನವದೆಹಲಿ: ಗಾಜಿನಿಂದ ಲೇಪಿತವಾದ ಚೀನಾ ಗಾಳಿಪಟ ಸಿವಿಲ್ ಎಂಜಿನಿಯರ್ ಜೀವಕ್ಕೆ ಕುತ್ತು ತಂದ ಘಟನೆ ನಡೆದಿರುವ ಬಗ್ಗೆ ಇಂದು ಬೆಳಕಿಗೆ ಬಂದಿದೆ.

ಮೃತ ದುರ್ದೈವಿಯನ್ನು 28 ವರ್ಷದ ಮನವ್ ಶರ್ಮಾ ಎಂದು ಗುರುತಿಸಲಾಗಿದೆ. ಬುದ್ ವಿಹಾರ್ ನಿವಾಸಿಯಾಗಿರೋ ಮನವ್, ಖಾಸಗಿ ಕಂಪನಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ನಡೆದಿದ್ದೇನು?:
ರಕ್ಷಾ ಬಂಧನದ ದಿನವಾದ ಗುರುವಾರದಂದು ಮನವ್ ತನ್ನ ಇಬ್ಬರು ಸಹೋದರಿಯರನ್ನು ಹರಿ ನಗರದಲ್ಲಿರುವ ತನ್ನ ಆಂಟಿಯ ಮನೆಗೆ ಸ್ಕೂಟರ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು.

ಹೀಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಪಶ್ಚಿಮ್ ವಿಹಾರ್ ಫ್ಲೈಓವರ್ ಬಳಿ ಬರುತ್ತಿದ್ದಂತೆಯೇ ಮನವ್ ಕುತ್ತಿಗೆಗೆ ಗಾಜಿನಿಂದ ಲೇಪಿತವಾದ ಚೀನಾ ಗಾಳಿಪಟದ ದಾರ ಸುತ್ತುವರಿದಿದೆ. ಅಲ್ಲದೆ ಮನವ್ ಕುತ್ತಿಗೆಯನ್ನೇ ಸೀಳಿದೆ. ಪರಿಣಾಮ ಶ್ವಾಸನಾಳಕ್ಕೂ ಗಂಭೀರ ಹಾನಿಗೀಡಾಗಿದೆ. ಹೀಗಾಗಿ ಮನವ್ ಅವರು ಸ್ಕೂಟರ್ ನಿಲ್ಲಿಸುವ ಮೊದಲೇ ಅದರಿಂದ ಕೆಳಗೆ ಬಿದ್ದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಘಟನೆ ನಡೆದ ಕೂಡಲೇ ಮನವ್ ಅವರನ್ನು ಸ್ಥಳೀಯರು ಸೇರಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಮನವ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ದುರ್ಘಟನೆಯಲ್ಲಿ ಮನವ್ ಸಹೋದರಿಯರು ಅಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ದಿನವೇ ಈ ಗಾಳಿಪಟ ಸಂಬಂಧ ದೆಹಲಿ ಪೊಲೀಸರಿಗೆ 15 ಕರೆಗಳು ಬಂದಿವೆ. ಅಲ್ಲದೆ ಗಾಳಿಪಟದಿಂದಾಗಿ 8 ಮಂದಿಗೆ ಗಾಯಗಳಾಗಿವೆ. ಒಟ್ಟಿನಲ್ಲಿ ಗ್ಲಾಸ್ ಕೋಟ್ ಮಾಡಿರುವ ಗಾಳಿಪಟ ಬಳಕೆ ಮಾಡಿದ 17 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬುದಾಗಿ ವರದಿಯಾಗಿದೆ.

Comments

Leave a Reply

Your email address will not be published. Required fields are marked *