ಕರ್ನಾಟಕದ ಗಡಿಯಲ್ಲಿ 2 ಸಾವಿರ ರೂ. ಮುಖ ಬೆಲೆಯ ಕಂತೆ-ಕಂತೆ ನಕಲಿ ನೋಟುಗಳು ಪತ್ತೆ

ಚಾಮರಾಜನಗರ: ಗಡಿನಾಡು ಚಾಮರಾಜನಗರ ತಾಲೂಕಿನ ಅಟ್ಟಗುಳಿಪುರದಲ್ಲಿ 2 ಸಾವಿರ ರೂ. ಮುಖ ಬೆಲೆಯ ಕಂತೆ-ಕಂತೆ ನಕಲಿ ನೋಡುಗಳು ಪತ್ತೆಯಾಗಿದ್ದು, ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಗೂಡ್ಸ್ ಆಟೋದಲ್ಲಿ ನಕಲಿ ನೋಟುಗಳನ್ನು ಸಾಗಿಸುತ್ತಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಅಟ್ಟಗುಳಿಪುರ ಸಮೀಪದ ಸುವರ್ಣವತಿ ಜಲಾಶಯದ ಬಳಿ ಆಟೋವನ್ನು ತಡೆದು, ತಪಾಸಣೆ ನಡೆಸಿದರು. ಆದರೆ ನಕಲಿ ನೋಟುಗಳು ಪತ್ತೆಯಾಗಲಿಲ್ಲ. ಖಚಿತ ಮಾಹಿತಿ ಇದ್ದರೂ ನಕಲಿ ನೋಟು ಸಿಗದಿದ್ದಾಗ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದರು.

ಆಟೋದಲ್ಲಿದ್ದ ಓರ್ವನನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿ ನಕಲಿ ನೋಟುಗಳನ್ನು ಎಲ್ಲಿವೆ ಎಂದು ಪ್ರಶ್ನಿಸಿದರು. ಭಯದಿಂದ ಆರೋಪಿಯು ಆಟೋ ಹಿಂಭಾಗದಲ್ಲಿ ಇದ್ದ ಬಾಕ್ಸ್ ತೆರೆದು ಹಣ ತೋರಿಸಿ, 2 ಸಾವಿರ ರೂ. ಮುಖಬೆಲೆಯ ಕಂತೆ-ಕಂತೆ ನಕಲಿ ನೋಟುಗಳನ್ನು ಹೊರ ತೆಗೆದಿದ್ದಾನೆ. ತಕ್ಷಣವೇ ಪೊಲೀಸರು ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ರಾಮಸಮುದ್ರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಬಂಧಿತ ಆರೋಪಿಯ ಮಾಹಿತಿಯನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.  ಈ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರಿಗೆ ಪ್ರಕರಣದ ಹಿಂದೆ ದೊಡ್ಡ ಜಾಲವೇ ಇದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *