ಮೋದಿಯ ಮೂರು ಪ್ರಸ್ತಾಪವನ್ನು ಸ್ವಾಗತಿಸಿದ ಚಿದಂಬರಂ

ನವದೆಹಲಿ: ಪ್ರಧಾನಿ ಮೋದಿ ಅವರ ಮೇಲೆ ಸದಾ ಕಿಡಿಕಾರುತ್ತಿದ್ದ ಕಾಂಗ್ರೆಸ್‍ನ ಹಿರಿಯ ನಾಯಕ ಪಿ ಚಿದಂಬರಂ, ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮೋದಿ ಹೇಳಿದ ಮೂರು ವಿಚಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪಿ ಚಿದಂಬರಂ, ಮೋದಿ ಅವರು ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಸ್ತಾಪ ಮಾಡಿದ, ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಣ್ಣ ಕುಟುಂಬ ಹೊಂದುವುದು ದೇಶ ಭಕ್ತಿ ಸಂಕೇತ, ಸಂಪತ್ತು ಸೃಷ್ಟಿಸುವ ಉದ್ಯಮಿಗಳನ್ನು ಗೌರವಿಸಿ, ಪ್ಲಾಸ್ಟಿಕ್‍ ನಿರ್ಮೂಲನೆ ವಿಚಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

ಮೋದಿ ಹೇಳಿದ ಮೂರು ವಿಚಾರದಲ್ಲಿ ಮೊದಲನೇ ಮತ್ತು ಮೂರನೇ ವಿಷಯವಾದ ಜನಸಂಖ್ಯೆ ಮತ್ತು ಏಕ ಬಳಕೆಯ ಪ್ಲಾಸ್ಟಿಕ್‍ಗಳನ್ನು ನಿರ್ಮೂಲನೆ ಮಾಡುವುದು ದೇಶದ ಜನರ ಚಳುವಳಿಗಳಾಗಿರಬೇಕು. ಈ ಚಳುವಳಿಗಳನ್ನು ಮುನ್ನಡೆಸಲು ಸಿದ್ಧರಿರುವ ನೂರಾರು ಸಮರ್ಪಿತ ಸ್ವಯಂಸೇವಾ ಸಂಸ್ಥೆಗಳು ತಳಮಟ್ಟದಿಂದ ಕೆಲಸ ಮಾಡಬೇಕು ಎಂದು ಪಿ. ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ವಿಚಾರವಾದ ಸಂಪತ್ತು ಸೃಷ್ಟಿಸುವ ಉದ್ಯಮಿಗಳನ್ನು ಗೌರವಿಸಿ ಎಂದು ಮೋದಿ ಹೇಳಿಕೆಯನ್ನು ಹಣಕಾಸು ಸಚಿವರು ಮತ್ತು ತೆರಿಗೆ ಅಧಿಕಾರಿಗಳು ಸ್ಪಷ್ಟವಾಗಿ ಕೇಳಿದ್ದಾರೆಂದು ನಾವು ಭಾವಿಸುತ್ತೇನೆ. ಇದನ್ನು ಅವರೇ ಕಾರ್ಯರೂಪಕ್ಕೆ ತರಬೇಕು ಎಂದು ಮಾಜಿ ಹಣಕಾಸು ಸಚಿವರು ಪಿ ಚಿದಂಬರಂ ತಿಳಿಸಿದ್ದಾರೆ.

ದೆಹಲಿಯ ಕೆಂಪುಕೋಟೆಯಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ ಅವರು, ಭಾರತದಲ್ಲಿ ಜನಸಂಖ್ಯಾ ಸ್ಫೋಟ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಮುಂದಿನ ಪೀಳಿಗೆಗೆ ಅನೇಕ ಸಮಸ್ಯೆಗಳು ಉಂಟುಮಾಡುತ್ತೇವೆ. ನಾವು ಈ ವಿಚಾರದ ಬಗ್ಗೆ ಈಗಲೇ ಗಮನಹರಿಸಬೇಕು. ಪ್ಲಾಸ್ಟಿಕ್ ಚೀಲವನ್ನು ನಮ್ಮಿಂದ ನಿರೀಕ್ಷಿಸಬೇಡಿ ಎಂಬ ಬೋರ್ಡ್ ಪ್ರತಿ ಅಂಗಡಿಯಲ್ಲೂ ಇರಲಿ. ಪ್ಲಾಸ್ಟಿಕ್ ಬ್ಯಾಗ್ ಬದಲು ಬಟ್ಟೆಯಿಂದ ತಯಾರಿಸಿದ ಬ್ಯಾಗ್‍ಗಳನ್ನು ಬಳಕೆ ಮಾಡಬೇಕಿದೆ ಎಂದು ಹೇಳಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದರು.

ಇದೇ ವೇಳೆ ದೇಶದಲ್ಲಿ ಜನಸಂಖ್ಯಾ ಸ್ಫೋಟದ ಬಗ್ಗೆ ಮಾತನಾಡಿದ ಮೋದಿ ಅವರು, ಭಾರತದಲ್ಲಿ ಜನಸಂಖ್ಯಾ ಸ್ಫೋಟ ಮಿತಿ ಮೀರಿ ಹೋಗುತ್ತಿದೆ. ಮುಂದಿನ ಪೀಳಿಗೆಗೆ ಇದು ದೊಡ್ಡ ಸವಾಲು ಒಡ್ಡಲಿದೆ. ಮಗುವಿಗೆ ಜನ್ಮ ನೀಡುವ ಮುನ್ನ ಯೋಚಿಸಿ, ಮುಗುವಿನ ಎಲ್ಲ ಅವಶ್ಯಕತೆ ಪೂರೈಸಬಹುದೇ ಎಂಬುದನ್ನು ಯೋಚಿಸಿ ನಿರ್ಣಯ ಕೈಗೊಳ್ಳಿ ಎಂದು ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದರು.

Comments

Leave a Reply

Your email address will not be published. Required fields are marked *