ಜಮ್ಮು ಕಾಶ್ಮೀರಕ್ಕೆ ಬರಲು ಪ್ಲೇನ್‍ಗಿಂತ ಸ್ವಾತಂತ್ರ್ಯದ ಅಗತ್ಯವಿದೆ- ರಾಜ್ಯಪಾಲರಿಗೆ ರಾಹುಲ್ ತಿರುಗೇಟು

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ಆಗಮಿಸಲು ವಿಮಾನದ ಅವಶ್ಯಕತೆ ಇಲ್ಲ, ಬದಲಿಗೆ ಸ್ವಾತಂತ್ರ್ಯ ಬೇಕಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್‍ಗೆ ತಿರುಗೇಟು ನೀಡಿದ್ದಾರೆ.

ಈ ಹಿಂದೆ ರಾಹುಲ್ ಗಾಂಧಿ ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ನಡೆದಿರುವ ಕುರಿತು ವರದಿಯಾಗಿದೆ ಎಂಬ ಹೇಳಿಕೆಗೆ ಸೋಮವಾರವಷ್ಟೇ ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಕಾಂಗ್ರೆಸ್ ನಾಯಕರು ಸುಖಾಸುಮ್ಮನೆ ಈ ಕುರಿತು ಆರೋಪ ಮಾಡಬಾರದು. ರಾಹುಲ್ ಗಾಂಧಿ ಅವರು ಜಮ್ಮು ಕಾಶ್ಮೀರಕ್ಕೆ ಆಗಮಿಸಲು ನಾನು ವಿಮಾನದ ವ್ಯವಸ್ಥೆ ಮಾಡುತ್ತೇನೆ. ಇಲ್ಲಿಗೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಪ್ರತಿಕ್ರಿಯಿಸಲಿ ಎಂದು ತಿರುಗೇಟು ನೀಡಿದ್ದರು.

ರಾಜ್ಯಪಾಲರ ಆಹ್ವಾನಕ್ಕೆ ಇಂದು ಟ್ವಿಟ್ಟರ್ ಮೂಲಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ನಮಗೆ ಯಾವುದೇ ರೀತಿಯ ವಿಮಾನದ ಅವಶ್ಯಕತೆ ಇಲ್ಲ. ನಾವು ಜಮ್ಮು ಕಾಶ್ಮೀರ ಹಾಗೂ ಲಡಾಖ್‍ಗೆ ಆಗಮಿಸುತ್ತೇವೆ. ಆಗ ಜನರನ್ನು, ಅಲ್ಲಿನ ನಾಯಕರನ್ನು ಹಾಗೂ ಸೈನಿಕರನ್ನು ಭೇಟಿ ಮಾಡುವ ಸ್ವಾತಂತ್ರ್ಯವನ್ನು ನೀಡಲಿ ಎಂದು ಕುಟುಕಿದ್ದಾರೆ.

ರಾಜ್ಯಪಾಲರ ಹೇಳಿಕೆ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಸಹ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿ ಒಬ್ಬರನ್ನೇ ಯಾಕೆ ಆಹ್ವಾನಿಸುತ್ತೀರಿ ನಮ್ಮನ್ನೂ ಆಹ್ವಾನಿಸಿ. ಜಮ್ಮು ಕಾಶ್ಮೀರದ ಪರಿಸ್ಥಿತಿಯನ್ನು ಅರಿಯಲು ಸರ್ವ ಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗುವಂತೆ ಈಗಾಗಲೇ ಲೋಕಸಭೆಯಲ್ಲಿ ಕೇಳಿದ್ದೇನೆ ಎಂದು ತಿಳಿಸಿದ್ದಾರೆ.

ನಾವು ವಿಮಾನವನ್ನು ಕಳುಹಿಸುತ್ತೇವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜಮ್ಮು ಕಾಶ್ಮೀರದ ಪರಿಸ್ಥಿತಿಯನ್ನು ಖುದ್ದು ಗಮನಿಸಲಿ, ನಂತರ ಕಾಶ್ಮಿರದ ಬಗ್ಗೆ ಮಾತನಾಡಲಿ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿದ್ದಾರೆ.

ರಾಹುಲ್ ಗಾಂಧಿ ಅವರು ಇಲ್ಲಿಗೆ ಬರುವಂತೆ ಆಹ್ವಾನಿಸಿದ್ದೇನೆ. ಅವರು ಇಲ್ಲಿಗೆ ಭೇಟಿ ನೀಡಲು ನಾನು ವಿಮಾನದ ವ್ಯವಸ್ಥೆ ಮಾಡುತ್ತೇನೆ. ಬಂದು ಇಲ್ಲಿನ ಪರಿಸ್ಥಿತಿಯನ್ನು ಅರಿತು ನಂತರ ಪ್ರತಿಕ್ರಿಯೆ ನೀಡಲಿ. ನೀವು ಜವಾಬ್ದಾರಿಯುತ ವ್ಯಕ್ತಿಯಾಗಿದ್ದಾರಿ, ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ರಾಹುಲ್ ಗಾಂಧಿ ಅವರಿಗೆ ಜಮ್ಮು ಕಾಶಇರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಎಚ್ಚರಿಸಿದ್ದರು.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿರುವ ಕೇಂದ್ರ ಸರ್ಕಾರದ ಕ್ರಮವು ಯಾವುದೇ ಕೋಮುವಿಗೆ ಸೀಮಿತವಾಗಿಲ್ಲ. ಆ ರೀತಿ ಯೋಚಿಸಬಾರದು. 370ನೇ ವಿಧಿ ಹಾಗೂ 35ಎ ರದ್ದು ಪಡಿಸಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿತ್ತು. ಲೇಹ್, ಕಾರ್ಗಿಲ್, ಜಮ್ಮು, ರಾಜೌರಿ-ಪೂಂಚ್ ಸೇರಿದಂತೆ ಕಾಶ್ಮೀರದ ಕಣಿವೆಯಲ್ಲಿ ಯಾವುದೇ ಕೋಮು ಭಾವನೆ ಇಲ್ಲ. ಕೆಲವು ಜನರು ಮಾತ್ರ ಇದನ್ನು ವಿರೋಧಿಸುತ್ತಿದ್ದಾರೆ. ಆದರೆ, ಬಹುತೇಕರಿಗೆ ಇದರಿಂದ ಸಂತೋಷವಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದರು.

ವಿದೇಶಿ ಪತ್ರಿಕೆಗಳು ಸುಳ್ಳು ಸುದ್ದಿ ಬಿತ್ತರಿಸುವ ಪ್ರಯತ್ನ ಮಾಡುತ್ತಿವೆ. ಈ ಕುರಿತು ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಎಲ್ಲ ಆಸ್ಪತ್ರೆಗಳು ತೆರೆದಿವೆ. ಒಬ್ಬ ವ್ಯಕ್ತಿಗೆ ಗುಂಡು ತಗುಲಿರುವುದನ್ನು ಸಾಬೀತುಪಡಿಸಲಿ. ಹಿಂಸಾಚಾರ ನಡೆದಾಗ ಕೇವಲ ನಾಲ್ಕು ಜನರಿಗೆ ಮಾತ್ರ ಕಾಲಿಗೆ ಪೆಲೆಟ್ ಬಿದ್ದಿದೆ. ಯಾರು ಗಂಭೀರವಾಗಿ ಗಾಯಗೊಂಡಿಲ್ಲ. ಪರಿಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *