ನೆರೆ ಹಾನಿಗೀಡಾದ ಪ್ರದೇಶಗಳಿಗೆ ರಮೇಶ್ ಜಾರಕಿಹೊಳಿ ಭೇಟಿ

ಬೆಳಗಾವಿ: ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ಇಂದು ತಮ್ಮ ಗೋಕಾಕ್ ಕ್ಷೇತ್ರದ ವಿವಿಧ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗೋಕಾಕ್‍ನ ದುಪದಾಳ್ ಗ್ರಾಮದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾನೆಂದೂ ಈ ರೀತಿಯ ಪ್ರವಾಹವನ್ನು ನೋಡಿರಲಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡುತ್ತಿದ್ದೇನೆ. ಯಾವ ಭಾಗದಲ್ಲಿ ಎಷ್ಟು ಹಾನಿಯಗಿದೆ, ಎಷ್ಟು ಮನೆಗಳು ನೆಲಸಮವಾಗಿವೆ ಎಂಬ ಸಂಪೂರ್ಣ ವರದಿಯನ್ನು ತಯಾರಿಸುತ್ತೇನೆ. ಬಳಿಕ ಅದನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತೇನೆ ಎಂದು ತಿಳಿಸಿದರು.

ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದೇನೆ. ಅಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರವಾಹ ಪೀಡಿತ ಜನರ ಜೊತೆಗೆ ನಾನಿದ್ದೇನೆ. ಅವರು ಹೆದರು ಅವಶ್ಯಕತೆ ಇಲ್ಲ. ಮನೆಯಲ್ಲಿದ್ದ ದಾಖಲೆ ಪತ್ರಗಳು, ಪುನರ್ ವಸತಿ ಸೇರಿದಂತೆ ಎಲ್ಲ ರೀತಿಯ ಸಹಾಯವನ್ನು ಕಲ್ಪಿಸುತ್ತೇನೆ. ಅವರು ಬದುಕು ಕಟ್ಟಿಕೊಡಲು ಎಲ್ಲ ರೀತಿಯ ನೆರವಿಗಾಗಿ ಸರ್ಕಾರ ಹಾಗೂ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ ಎಂದರು.

Comments

Leave a Reply

Your email address will not be published. Required fields are marked *