KRS ಡ್ಯಾಂ ಭರ್ತಿಗೆ ಇನ್ನೆರಡು ಅಡಿ ಮಾತ್ರ ಬಾಕಿ – ಒಂದೂವರೆ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

ಮಂಡ್ಯ: ಕೃಷ್ಣರಾಜಸಾಗರ ಜಲಾಶಯ(ಕೆಆರ್‌ಎಸ್‌)ದ ನೀರಿನ ಮಟ್ಟ ಇಂದು 122 ಅಡಿ ತಲುಪಿದೆ. ಮಧ್ಯಾಹ್ನ ವೇಳೆಗೆ ಕೆಆರ್‌ಎಸ್‌ ಒಳಹರಿವು ಮತ್ತು ಹೊರ ಹರಿವಿನಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಹಾರಂಗಿ, ಹೇಮಾವತಿ ಜಲಾಶಯದಿಂದಲೂ ಹೊರ ಹರಿವು ಇಳಿಸಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಅಣೆಕಟ್ಟಿನ ಹೊರ ಹರಿವಿನಲ್ಲೂ ಗಣನೀಯ ಇಳಿಕೆಯಾಗುವ ಸಾಧ್ಯತೆ ಇದೆ.

ಒಳ ಹರಿವು ನೋಡಿಕೊಂಡು ಡ್ಯಾಂನ ಹೊರ ಹರಿವು ಇಳಿಸಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಮಧ್ಯಾಹ್ನದ ನಂತರ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ತಗ್ಗಲಿದೆ. ಒಟ್ಟು 124.80 ಅಡಿ ಸಂಗ್ರಹ ಸಾಮರ್ಥ್ಯದ ಕೆಆರ್‌ಎಸ್‌ನ ಇಂದಿನ ನೀರಿನ ಮಟ್ಟ 122.30 ಅಡಿ ಇದ್ದು, 204200 ಕ್ಯೂಸೆಕ್ ಒಳ ಹರಿವು ಇದೆ. 151365 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಕ್ಕೆ ಬಿಡಲಾಗುತ್ತಿದೆ. ಸದ್ಯ ಅಣೆಕಟ್ಟಿನಲ್ಲಿ 46.032 ಟಿಎಂಸಿ ನೀರಿನ ಸಂಗ್ರಹವಿದೆ.

ನೀರಿಗೆ ಬಣ್ಣದ ಚಿತ್ತಾರ:
ಕೆಆರ್‌ಎಸ್‌ನಿಂದ 1 ಲಕ್ಷದ 50 ಸಾವಿರ ಕ್ಯೂಸೆಗೂ ಅಧಿಕ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ. ಅಣೆಕಟ್ಟಿನಿಂದ ರಭಸವಾಗಿ ಹೊರ ಹೋಗುತ್ತಿರುವ ನೀರು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹೀಗಾಗಿ ರಾತ್ರಿ ವೇಳೆ ಕೆಆರ್‌ಎಸ್‌ ಅಣೆಕಟ್ಟಿನಿಂದ ಹೊರ ಹೋಗುವ ಮನೋಹರವಾಗಿ ಕಾಣುವಂತೆ ಮಾಡಲು ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಹೊರ ಹೋಗುತ್ತಿರುವ ನೀರಿನ ಮೇಲೆ ಬಣ್ಣ ಬಣ್ಣದ ಬೆಳಕು ಬೀಳುವಂತೆ ಹಾಗೂ ದೂರದಿಂದ ನಿಂತು ನೋಡಿದರೂ ಹೊರಹರಿವು ಕಾಣುವಂತೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.

ಚಂದ್ರವನ ಆಶ್ರಮ ಜಲಾವೃತ:
ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣದ, ಪಶ್ಚಿಮವಾಹಿನಿ ಸಮೀಪ ಇರುವ ಚಂದ್ರವನ ಆಶ್ರಮ ಜಲಾವೃತಗೊಂಡಿದೆ. ಕಾವೇರಿ ನದಿ ದಂಡೆಯಲ್ಲಿರುವ ಚಂದ್ರವನ ಆಶ್ರಮದಲ್ಲಿರುವ ಗೋವುಗಳ ರಕ್ಷಣೆ ಮಾಡಲಾಗಿದೆ.

Comments

Leave a Reply

Your email address will not be published. Required fields are marked *