ಹಿನ್ನೀರಿನಿಂದ ಮುಳುಗಡೆಗೊಂಡ ಸೋಲಾರ್ ಪ್ಲಾಂಟ್

ರಾಯಚೂರು: ನದಿ ಹಿನ್ನೀರಿನಿಂದ ಜಿಲ್ಲೆಯ ಗುರ್ಜಾಪುರ ಬಳಿ ಇರುವ ಸೋಲಾರ್ ಪ್ಲಾಂಟ್ ಮುಳುಗಡೆಯಾಗಿದೆ.

ವೆಂಕಟೇಶ್ ಎಂಬವರ ಖಾಸಗಿ ಸೋಲಾರ್ ಪ್ಲಾಂಟ್ ನದಿ ಹಿನ್ನೀರಿನಿಂದ ಹಳ್ಳ ತುಂಬಿ ಸೋಲಾರ್ ಪ್ಲಾಂಟ್ ಮುಳುಗಡೆಗೊಂಡಿದೆ. ಮಳೆ ನೀರು ಗುರ್ಜಾಪುರ ಗ್ರಾಮಕ್ಕೂ ನುಗ್ಗಿದ್ದು, ಅಲ್ಲಿನ ಗ್ರಾಮಸ್ಥರನ್ನ ಜೇಗರಕಲ್ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ನಾರಾಯಣಪುರ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ 51 ಹಳ್ಳಿಗಳಿಗೆ ಮುಳುಗಡೆಯಾಗುವ ಭೀತಿ ಎದುರಾಗಿದೆ. ಹೀಗಾಗಿ ಈಗಾಗಲೇ 21 ಗ್ರಾಮಗಳ ಜನರನ್ನು ಸ್ಥಳಾಂತರ ಮಾಡಲಾಗಿದೆ. ದೇವದುರ್ಗದ ಕೊಪ್ಪರ, ಯಾಟಗಲ್, ಹೂವಿನಹೆಡಗಿ, ಹಿರೇರಾಯಕುಂಪಿ, ಅಂಜಳ ಗ್ರಾಮಕ್ಕೆ ನೀರು ನುಗ್ಗಿದ್ದು, ಆರ್ಮಿ ಹಾಗೂ ಪೊಲೀಸ್ ಇಲಾಖೆಯಿಂದ ಗ್ರಾಮಸ್ಥರ ಸ್ಥಳಾಂತರ ಮಾಡಲಾಗಿದೆ. ದೇವದುರ್ಗ ತಾಲೂಕಿನಲ್ಲಿ ಹತ್ತಾರು ದೇವಸ್ಥಾನಗಳ ಮುಳುಗಡೆಯಾಗಿವೆ.

ಸೇತುವೆ ಮುಳುಗಡೆ ಜಲದುರ್ಗದಲ್ಲೆ ಲಿಂಗಸೂಗೂರು ತಹಶೀಲ್ದಾರ್, ಸಿಪಿಐ ಮತ್ತು ಇತರೆ ಅಧಿಕಾರಿಗಳ ತಂಡ ಉಳಿದಿದೆ. ಲಿಂಗಸೂಗೂರು ತಾಲೂಕಿನ 7 ಗ್ರಾಮಗಳು ಹಾಗೂ ರಾಯಚೂರು ತಾಲೂಕಿನ ಮೂರು ಗ್ರಾಮಗಳು ನಡುಗಡ್ಡೆಗಳಾಗಿವೆ. ಮುಂದುವರಿದ ಕೃಷ್ಣಾ ನದಿ ಪ್ರವಾಹದಿಂದಾಗಿ ದೇವದುರ್ಗ ಹಾಗೂ ಯಾದಗಿರಿ ಸಂಪರ್ಕ ಕಲ್ಪಿಸುವ ಗೂಗಲ್ ಸೇತುವೆ ಮುಳುಗಡೆಯಾಗಿದೆ. ಸೇತುವೆಯ ಮೇಲಿನಿಂದ ನೀರು ಹರಿಯುತ್ತಿರೋದ್ರಿಂದ ಸಂಚಾರ ಬಂದ್ ಆಗಿದೆ.

ಉಕ್ಕಿ ಹರಿಯುತ್ತಿರುವ ಕೃಷ್ಣೆಯಿಂದ ಬಹುತೇಕ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿದ್ದು, ಈಗಾಗಲೇ ಜಿಲ್ಲೆಯ ಹತ್ತಾರು ಸೇತುವೆಗಳ ಸಂಪರ್ಕ ಕಡಿತವಾಗಿದೆ. ತಿಂಥಣಿ ಸೇತುವೆ ಹಾಗೂ ದೇವಸಗೂರು ಸೇತುವೆ ಮುಳುಗಡೆ ಸಾಧ್ಯತೆ ಇದೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 6.30 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *