ಕಣ್ಣಿನ ಶಸ್ತ್ರಚಿಕಿತ್ಸೆಗೆ ಮುನ್ನವೇ ದುರ್ಘಟನೆ ಸಂಭವಿಸ್ತಿದ್ದರೆ ಖಂಡಿತಾ ಮುಂದೂಡ್ತಿದ್ದೆ- ಸಿದ್ದರಾಮಯ್ಯ

ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಪ್ರವಾಹಕ್ಕೆ 27 ಗ್ರಾಮಗಳು ಜಲಾವೃತಗೊಂಡಿದ್ದರೂ, ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯನವರು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಎಲ್ಲ ಆರೋಪಗಳಿಗೆ ಸಿದ್ದರಾಮಯ್ಯ ಅವರು ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಬಾದಾಮಿ ಒಂದೇ ಅಲ್ಲ, ಶಾಸಕಾಂಗ ಪಕ್ಷದ ನಾಯಕನಾಗಿ ರಾಜ್ಯದ ಎಲ್ಲ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ಕೊಡಬೇಕಿತ್ತು. ಆದರೆ ವೈದ್ಯರು ನೀಡಿರುವ ಕೆಲ ಸೂಚನೆಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ನನ್ನಿಂದ ಅದು ಸಾಧ್ಯವಾಗುತ್ತಿಲ್ಲ. ಬಾದಾಮಿಯ ಶಾಸಕನಾಗಿರುವುದರಿಂದ ಕ್ಷೇತ್ರದ ಜನರು ನನ್ನ ಉಪಸ್ಥಿತಿ ಬಯಸುವುದು ಸಾಮಾನ್ಯ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನವೇ ಇಂತಹ ದುರ್ಘಟನೆ ಸಂಭವಿಸಿದ್ದರೆ ಖಂಡಿತಾ ಶಸ್ತ್ರಚಿಕಿತ್ಸೆಯನ್ನು ಸ್ವಲ್ಪ ದಿನಗಳ ಕಾಲ ಮುಂದೂಡುತ್ತಿದ್ದೆ ಎಂದು ತಿಳಿಸಿದ್ದಾರೆ.

ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿ ಜನ ಜಾನುವಾರುಗಳ ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಹಾಗೂ ಸಂತ್ರಸ್ತರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸಾಧ್ಯವಾದಷ್ಟು ಶೀಘ್ರದಲ್ಲಿಯೇ ಕಲ್ಪಿಸಬೇಕು ಎಂದು ಮನವಿ ಮಾಡುತ್ತೇನೆ. ನವಿಲುತೀರ್ಥ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾದ ಹಿನ್ನೆಲೆಯಲ್ಲಿ ಬಾದಾಮಿಯ 27 ಗ್ರಾಮಗಳು ಜಲಾವೃತಗೊಂಡಿವೆ. ತಾಲೂಕಿನಲ್ಲಿ ಹಲವು ಕಡೆ ಗಂಜಿಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರಿಹಾರ ಕಾರ್ಯಗಳ ಉಸ್ತುವಾರಿ ವಹಿಸಿಕೊಳ್ಳುವಂತೆ ನನ್ನ ಮಗ ಯತೀಂದ್ರ ಅವರನ್ನು ಕಳುಹಿಸಿದ್ದೇನೆ. ಹಾಗಾಗಿ ಯಾರು ಭಯಪಡಬೇಕಿಲ್ಲ ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.

ರಾಜ್ಯದ 16 ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. 20ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ, ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳು ಸಾವನ್ನಪ್ಪಿವೆ, ಹಲವಾರು ಮನೆಗಳು ಕೊಚ್ಚಿಹೋಗಿವೆ, ಲಕ್ಷಾಂತರ ಎಕರೆ ಬೆಳೆ ನಷ್ಟವಾಗಿದೆ. ಹೀಗೆ ಇನ್ನು ಅನೇಕ ದುರಂತ ಸಂಭವಿಸಿದೆ. ಇಷ್ಟು ಭೀಕರ ಪ್ರವಾಹ ನಾನು ನನ್ನ ರಾಜಕೀಯ ಜೀವನದಲ್ಲೇ ಕಂಡಿಲ್ಲ. ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗ ಮಳೆಯಿಂದಾಗಿ ತತ್ತರಿಸಿಹೋಗಿದ್ದು, ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೇಂದ್ರ ಸರ್ಕಾರ ಇದನ್ನು ಈ ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ರಕ್ಷಣಾ ಕಾರ್ಯಕ್ಕೆ ನೀಡುವ ಅನುದಾನದ ಜೊತೆಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಹೆಚ್ಚುವರಿ ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *