ಈಗ ನಮ್ಮ ಯುವಕರಿಗೆ ಕಾಶ್ಮೀರದ ಕನ್ಯೆ ತರಬಹುದು – ಹರಿಯಾಣ ಸಿಎಂ ವಿವಾದಾತ್ಮಕ ಹೇಳಿಕೆ

ನವದೆಹಲಿ: ಆರ್ಟಿಕಲ್ 370 ರದ್ದು, ಜಮ್ಮು ಕಾಶ್ಮೀರ ವಿಭಜನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಭಾರೀ ಚರ್ಚೆ ನಡೆದಿದೆ. ದೇಶದ ವಿವಿಧ ನಾಯಕರು ಈ ಕುರಿತು ತಮ್ಮದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹರಿಯಾಣ ಸಿಎಂ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.

ಫತೇಹಾಬಾದ್‍ನಲ್ಲಿ ನಡೆದ ಮಹರ್ಷಿ ಭಾಗೀರಥ್ ಜಯಂತಿಯಲ್ಲಿ ಭಾಗಿಯಾಗಿದ್ದ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ. ನಮ್ಮ ಸರ್ಕಾರದ ಕೆಲ ಸಚಿವರು ಹೆಣ್ಣು ಮಕ್ಕಳ ಲಿಂಗಾನುಪಾತದ ಕುರಿತು ಮಾತನಾಡುತ್ತಾ ಬಿಹಾರದಿಂದ ಸೊಸೆಯರನ್ನ ತರಬೇಕಾದ ಸ್ಥಿತಿ ಇದೆ ಎಂದಿದ್ದರು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಕಾಶ್ಮೀರಿ ಯುವತಿರನ್ನು ಮದುವೆಯಾಗುವ ಹಾದಿ ಸುಗಮವಾಗಿದೆ. ಆರ್ಟಿಕಲ್ 370 ರದ್ದಾಗಿರುವುದರಿಂದ ಇದು ಸಾಧ್ಯವಾಗಿದೆ. ಕಾಶ್ಮೀರಿ ಯುವತಿಯರನ್ನು ಸೊಸೆಯರಾಗಿ, ಪತ್ನಿಯರಾಗಿ ಮಾಡಿಕೊಳ್ಳಲು ಪ್ರಯತ್ನಿಸಬಹುದು ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಬೇಟಿ ಬಚಾವೋ, ಬೇಟಿ ಪಠಾವೋ ಯೋಜನೆಯ ಯಶಸ್ವಿಯಾಗಿದ್ದು, ಈ ಕಾರ್ಯಕ್ರಮದಿಂದ ಹರಿಯಾಣದಲ್ಲಿ ಲಿಂಗಾನುಪಾತ ವ್ಯತ್ಯಾಸ ಕಡಿಮೆ ಆಗಿದೆ. ಈ ಕಾರ್ಯಕ್ರಮ ಜಾರಿಯಾಗುವ ಮುನ್ನ ರಾಜ್ಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಲಿಂಗಾನುಪಾತದಲ್ಲಿ ಕಠಿಣ ಪರಿಸ್ಥಿತಿ ಇತ್ತು ಎಂದಿದ್ದಾರೆ.

ಆಗಸ್ಟ್ 07 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370 ರದ್ದು ಮಾಡಿದ್ದರಿಂದ ಆಗುವ ಪ್ರಯೋಜನವೇನು ಎಂಬುವುದರ ಬಗ್ಗೆ ಮಾತನಾಡಿದ್ದ ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿಕ್ರಮ್ ಸೈನಿ, ಇನ್ನುಮುಂದೆ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನ ಮದುವೆ ಆಗಬಹುದು ಎಂದು ಹೇಳಿದ್ದರು. ಶಾಸಕರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದೇಶದ ವ್ಯಾಪಿ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

Comments

Leave a Reply

Your email address will not be published. Required fields are marked *