ಏರ್‌ಪೋರ್ಟಿನಲ್ಲಿ 2.25 ಕೋಟಿ ಮೌಲ್ಯದ ವಜ್ರ ವಶ

ಚೆನ್ನೈ: ನಗರದ ಅಣ್ಣಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 2.25 ಕೋಟಿ ರೂ. ಮೌಲ್ಯದ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಮಲೇಷಿಯಾ ಮೂಲದ ಅಜ್ಮಲ್ ಖಾನ್ ಬಿನ್ ನಾಗೋರ್ ಮೇರಾ (48) ಎಂದು ಗುರುತಿಸಲಾಗಿದೆ. ಈತ ಬಾಟಿಕ್ ವಿಮಾನದಲ್ಲಿ ಕೌಲಾಲಂಪುರದಿಂದ ಆಗಮಿಸಿದ್ದನು. ಅಣ್ಣಾ ವಿಮಾನ ನಿಲ್ದಾಣದಿಂದ ಹೋಗುವಾಗ ಈತನ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದಿದೆ. ತಕ್ಷಣ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ವೇಳೆ ಆರೋಪಿ ತನ್ನ ಒಳ ಉಡುಪಿನಲ್ಲಿ ಎರಡು ಬಿಳಿ ಬಂಡಲ್ಸ್ ಗಳಿಂದ ವಜ್ರಗಳನ್ನು ಬಚ್ಚಿಟ್ಟುಕೊಂಡಿದ್ದನು. ಬಳಿಕ ಆತನ ಲಗೇಜ್ ಚೆಕ್ ಮಾಡಿದಾಗ ಮಲ್ಟಿ-ಫಂಕ್ಷನ್ ಕುಕ್ಕರ್ ಒಳಗೆ ಎಂಟು ಕಟ್ಟುಗಳು ಪತ್ತೆಯಾಗಿದ್ದು, ಅದರಲ್ಲಿ ಟೇಪ್‍ನಲ್ಲಿ ಸುತ್ತಿ ಕುಕ್ಕರ್ ಕೆಳಭಾಗದಲ್ಲಿ ಇಟ್ಟಿದ್ದನು. ಆ ಕಟ್ಟುಗಳಿಂದ ಅಮೂಲ್ಯವಾದ 55 ಬಿಳಿ ಮಿನಿ ಜಿಪ್‍ಲಾಕ್ ಕವರ್ ಪ್ಯಾಕ್‍ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಒಟ್ಟು ಸುಮಾರು 2,996 ಕ್ಯಾರೆಟ್ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ವಿಚಾರಣೆ ಮಾಡಿದಾಗ ವಿಮಾನ ನಿಲ್ದಾಣದ ಹೊರಗೆ ಅಪರಿಚಿತ ವ್ಯಕ್ತಿಗೆ ಇದನ್ನು ಹಸ್ತಾಂತರಿಸಬೇಕಾಗಿತ್ತು ಎಂದು ಹೇಳಿದ್ದಾನೆ. ನಂತರ ಅಧಿಕಾರಿಗಳು ಆತನ್ನು ವಿಮಾನ ನಿಲ್ದಾಣದ ಹೊರಗೆ ಕರೆದುಕೊಂಡು ಹೋಗಿ ಅಪರಿಚಿತ ವ್ಯಕ್ತಿಗಾಗಿ ಹುಡುಕಾಡಿದ್ದಾರೆ. ಆದರೆ ಆತ ಎಲ್ಲೂ ಪತ್ತೆಯಾಗಿಲ್ಲ.

ಸದ್ಯಕ್ಕೆ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *